ಶಿವಮೊಗ್ಗದಲ್ಲಿ ನೀಟ್‌ ಪರೀಕ್ಷೆ ಸುಸೂತ್ರ, ಸಾವಿರಕ್ಕು ಹೆಚ್ಚು ಅಭ್ಯರ್ಥಿಗಳು ಗೈರು, ಹೇಗಿತ್ತು ವ್ಯವಸ್ಥೆ?

ಶಿವಮೊಗ್ಗ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ನಡೆಸಿದ ನೀಟ್ (ಯುಜಿ) ಮರು ಪರೀಕ್ಷೆಯು ನಗರದ 14 ಕೇಂದ್ರಗಳಲ್ಲಿ ಭಾನುವಾರ ಸುಗಮವಾಗಿ ನೆರವೇರಿತು. ಪರೀಕ್ಷೆಯ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದವು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ವಿದ್ಯಾನಗರದ ಕೆನರಾ ಬ್ಯಾಂಕ್‌ನಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಭದ್ರತೆಯೊಂದಿಗೆ ಇರಿಸಲಾಗಿತ್ತು. ಬ್ಯಾಂಕ್‌ಗೆ ಸಿಐಎಸ್‌ಎಫ್ ಹಾಗೂ ಪೊಲೀಸರ ಭದ್ರತೆ ಕಲ್ಪಿಸಲಾಗಿತ್ತು. ಬ್ಯಾಂಕ್‌ನಿಂದ ಪರೀಕ್ಷಾ ಕೇಂದ್ರಗಳಿಗೂ ಪ್ರಶ್ನೆಪತ್ರಿಕೆಗಳನ್ನು ಪ್ರತ್ಯೇಕ ವಾಹನಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸಾಗಿಸಲಾಯಿತು.

-NEET-Re-Examination-in-Shimoga.

ಜಿಲ್ಲೆಯಲ್ಲಿ ಒಟ್ಟು 4,883 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅವರ ಪೈಕಿ 3,728 ಅಭ್ಯರ್ಥಿಗಳು ಹಾಜರಾಗಿದ್ದು, 1,155 ಜನ ಗೈರಾಗಿದ್ದರು. ಪರೀಕ್ಷಾ ಕೇಂದ್ರಗಳ ಒಳಗೆ ಪಾರದರ್ಶಕ ನೀರಿನ ಬಾಟಲಿ, ಧಾರ್ಮಿಕ ವಸ್ತುಗಳು ಅಥವಾ ಆಭರಣಗಳನ್ನು ಧರಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಉಳಿದಂತೆ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು.

ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷೆ ಆರಂಭಕ್ಕು ಮುನ್ನ ಮೈಕ್ ಮೂಲಕ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಲಾಯಿತು. ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸಿ, ಬಯೊಮೆಟ್ರಿಕ್ ಹಾಜರಾತಿ ಪಡೆದ ಬಳಿಕವೇ ಒಳಗೆ ಬಿಡಲಾಯಿತು. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರೀಕ್ಷೆ ಸುಗಮವಾಗಿ ನಡೆಯಲು ಪ್ರತಿ ಕೇಂದ್ರಕ್ಕೂ ಜಿಲ್ಲಾಡಳಿತವು ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳನ್ನು ನಿಯೋಜಿಸಿತ್ತು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion