ಶಿವಮೊಗ್ಗದ ಅಡ್ವಾನ್ಸಡ್‌ ಸ್ಟಡೀಸ್‌ ಕಾಲೇಜಿಗೆ ನೂತನ ಕಟ್ಟಡ, ಏನೇನು ಸೌಲಭ್ಯಗಳಿವೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS

ಶಿವಮೊಗ್ಗ: ನಗರದ ಎನ್‌ಇಎಸ್ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸಡ್‌ ಸ್ಟಡೀಸ್ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಕೊಠಡಿಗಳು, ಆಧುನಿಕ ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಸಭಾಂಗಣ ಹಾಗೂ ನವೀಕೃತ ಗ್ರಂಥಾಲಯ ಸೇರಿದಂತೆ ಕಾಲೇಜಿನ ನವೀಕೃತ ಕಟ್ಟಡ ಸಂಕೀರ್ಣವನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು.

➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಕಾಲೇಜಿನ ಆವರಣದಲ್ಲಿ 95ಕ್ಕೂ ಹೆಚ್ಚು ವೈವಿಧ್ಯಮಯ ತಳಿಯ ಹಣ್ಣಿನ ಗಿಡಗಳನ್ನು ಒಳಗೊಂಡಿರುವ ನೂತನ ಉದ್ಯಾನವನ ಹಾಗೂ ಕಿರು ಸಭಾಂಗಣ ಮತ್ತು ಪ್ರಾಂಶುಪಾಲರ ನೂತನ ಕೊಠಡಿಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

NES-Advanced-College-new-building-inaugurated

ಸವಾಲುಗಳ ಮಧ್ಯೆ ಹೆಮ್ಮರವಾದ ಸಂಸ್ಥೆ

ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, “ಕಳೆದ 17 ವರ್ಷಗಳ ಅವಧಿಯಲ್ಲಿ ಈ ವಿದ್ಯಾಸಂಸ್ಥೆಯು ಹತ್ತಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯ ನೆರಳಿನಲ್ಲಿ ಸಾಧಕರಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ” ಎಂದರು.

“ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು, ಅದರೊಂದಿಗೆ ಸಂಸ್ಕಾರವೂ ಅತ್ಯಗತ್ಯ. ಈ ಜಗತ್ತು ಎಂದಿಗೂ ಓದಿ ಮುಗಿಸಲಾಗದ ದೊಡ್ಡ ಪುಸ್ತಕವಿದ್ದಂತೆ. ಬದುಕು ಯಾವುದೇ ಶುಲ್ಕವಿಲ್ಲದೆ ಪ್ರತಿಯೊಬ್ಬರಿಗೂ ಜೀವನದ ಪಾಠ ಕಲಿಸುವ ಅತ್ಯುತ್ತಮ ಸಂಸ್ಥೆಯಾಗಿದೆ. ನಮ್ಮ ಆತ್ಮಸಾಕ್ಷಿಗೆ ಗೌರವ ನೀಡುತ್ತಾ, ವಾಸ್ತವತೆಯ ಅರಿವಿನೊಂದಿಗೆ ಬದುಕು ಮುನ್ನಡೆಸಿದಾಗ ಮಾತ್ರ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಬೋಧನಾ ವಿಧಾನ ಬದಲಾಗಲಿ’

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, “ಕೇವಲ ಭೌತಿಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಿಂದಲೇ ಉನ್ನತ ಶಿಕ್ಷಣದ ಪ್ರಗತಿ ಸಾಧ್ಯವಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಎಲ್ಲೆಡೆ ಸುಲಭವಾಗಿ ಸಿಗುತ್ತಿರುವುದರಿಂದ, ವಿದ್ಯಾರ್ಥಿಗಳು ಕಾಲೇಜಿಗೆ ಏಕೆ ಬರಬೇಕು? ಎಂಬ ಪ್ರಶ್ನೆ ಮೂಡುತ್ತಿದ್ದು, ಇದಕ್ಕೆ ಉಪನ್ಯಾಸಕರು ಮತ್ತು ಶಿಕ್ಷಣ ಸಂಸ್ಥೆಗಳು ಉತ್ತರ ಕಂಡುಕೊಳ್ಳಬೇಕಿದೆ” ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಶಿವಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್, ಖಜಾಂಚಿ ಡಿ.ಜಿ. ರಮೇಶ್, ನಿರ್ದೇಶಕರುಗಳಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಪಿ. ಮೈಲಾರಪ್ಪ, ಹೆಚ್.ಸಿ. ಶಿವಕುಮಾರ್, ಎಂ.ಎಸ್. ಅನಂತದತ್ತಾ, ಕುಲಸಚಿವ ಎನ್.ಕೆ. ಹರಿಯಪ್ಪ ಹಾಗೂ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!