ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ರೋಬೋಟ್, JNNCEಯಲ್ಲಿ ವಿಭಿನ್ನ ವೆಲಕಮ್‌, ಹೇಗಿತ್ತು?

ಶಿವಮೊಗ್ಗ: ನಗರದ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಅಂತಿಮ ವರ್ಷದ ಎಐ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ರೋಬೋಟ್ ಆತ್ಮೀಯವಾಗಿ ಸ್ವಾಗತಿಸಿತು. ಈ ವಿನೂತನ ಸ್ವಾಗತ ಕಾರ್ಯಕ್ರಮ ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಆಕರ್ಷಿಸಿತು.

ಸ್ವಾಗತ ಕಾರ್ಯಕ್ರಮದ ವೇಳೆ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ವಿಭಿನ್ನ ಯೋಜನೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಕೈ ಸನ್ನೆಗಳ ಮೂಲಕ ಬ್ಲೂಟೂತ್‌ ಬಳಸಿ ನಿಯಂತ್ರಿಸಬಹುದಾದ ರೊಬೊಟಿಕ್ ಆರ್ಮ್, ದೃಷ್ಟಿಹೀನರು ಹಾಗೂ ಸವಾರರಿಗೆ ನೈಜ ಸಮಯದ ವಸ್ತು ಪತ್ತೆ ಮತ್ತು ಧ್ವನಿ ಮಾರ್ಗದರ್ಶನ ನೀಡುವ ಎಐ ಸ್ಮಾರ್ಟ್ ಹೆಲ್ಮೆಟ್, ತಂತ್ರಜ್ಞಾನದ ನೆರವಿನಿಂದ ಪ್ರಜ್ವಲಿಸಿದ ದೀಪಸ್ತಂಭ, ಜೈವಿಕ ಇಂಧನದ ಪ್ರಯೋಗಗಳು ನೋಡುಗರನ್ನು ಆಕರ್ಷಿಸಿತು. ಇದೇ ವೇಳೆ ಕೆನರಾ ಬ್ಯಾಂಕ್ ಸಿಬ್ಬಂದಿ ಶಿಕ್ಷಣ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

JNNCE new Student Welcomed by AI Robot

ಅಭಿವಿನ್ಯಾಸಕ್ಕೆ ಚಾಲನೆ

ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ವಿವಿಧ ಇಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್‌.ನಾರಾಯಣ ರಾವ್‌ ಉದ್ಘಾಟಿಸಿದರು.

ಏನಂದ್ರು ನಾರಾಯಣ ರಾವ್?

POINT-1

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಎಸ್.ನಾರಾಯಣ ರಾವ್‌, ಅಧಿಕಾರಶಾಹಿ ಹಾಗೂ ಭ್ರಷ್ಟ ವ್ಯವಸ್ಥೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಯುವ ಸಮೂಹದ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಯುವಶಕ್ತಿ ಗಾಂಧೀ ಮಾರ್ಗದ ಮೂಲಕ ನಡೆಸುತ್ತಿರುವ ಹೋರಾಟಗಳು, ಸರ್ಕಾರಗಳನ್ನು ಎಚ್ಚರಿಸುವ ಹಾಗೂ ವ್ಯವಸ್ಥೆಯನ್ನು ಅಲುಗಾಡಿಸುವಲ್ಲಿ ಯಶಸ್ವಿಯಾಗಿವೆ. 

POINT-2

ಮಹಾಭಾರತ ಮತ್ತು ರಾಮಾಯಣಗಳು ಎಲ್ಲಿಯವರೆಗೆ ಪ್ರಸ್ತುತವಾಗಿರುತ್ತವೆಯೋ, ಅಲ್ಲಿಯವರೆಗೆ ಗಾಂಧೀ ಮಾರ್ಗವೂ ಪ್ರಸ್ತುತವಾಗಿರುತ್ತದೆ.

POINT-3

ಶಿಕ್ಷಣ ಪಡೆದವರಿಂದಲೇ ವ್ಯವಸ್ಥೆಗೆ ಸವಾಲುಗಳು ಎದುರಾಗುತ್ತಿರುವುದು ವಿಷಾದನೀಯ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು, ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ. ಹೀಗಾಗಿ ಯುವಕರು ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಜೀವನದ ಮೌಲ್ಯಗಳನ್ನಾಗಿಸಿಕೊಂಡು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.

POINT-4

ಸುಶಿಕ್ಷಿತರಾಗುವುದರ ಜೊತೆಗೆ ಸುಸಂಸ್ಕೃತರಾಗಬೇಕು. ಪೋಷಕರ ಆಶಯಗಳನ್ನು ಸದಾ ಗೌರವಿಸುವುದರೊಂದಿಗೆ, ಜ್ಞಾನಕ್ಕಿಂತಲೂ ಮಿಗಿಲಾದ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ, ಸಮಾಜಕ್ಕೆ ಬೆಳಕಾಗಬೇಕು.

ವಿದ್ಯಾರ್ಥಿಗಳ ಕಲ್ಪನೆಗಳಿಗೆ ಉತ್ಪನ್ನದ ರೂಪ ನೀಡಲು ಜೆಎನ್‌ಎನ್‌ ಕಾಲೇಜಿನಲ್ಲಿ ಐಡಿಯಾ ಲ್ಯಾಬ್‌ನಂತಹ ನಾವೀನ್ಯ ಉತ್ಪನ್ನ ನಿರ್ಮಾಣ ವೇದಿಕೆಗಳನ್ನು ರೂಪಿಸಲಾಗಿದೆ. ಅಂಕಗಳಿಗಿಂತ ಜ್ಞಾನ, ಕೌಶಲ್ಯ ಮತ್ತು ಪ್ರಾಯೋಗಿಕ ಅನುಭವಕ್ಕೆ ಆದ್ಯತೆ ನೀಡಿ. ಇದರಿಂದ ಉದ್ಯೋಗಾವಕಾಶದ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ. ಮುಂದೆ ಸ್ಟಾರ್ಟ್‌ಅಪ್‌ಗಳ ನಿರ್ಮಾಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಇಂಜಿನಿಯರಿಂಗ್ ಶಿಕ್ಷಣವು ಭದ್ರ ಬುನಾದಿಯಾಗಲಿ.

– ಎಸ್.ಎನ್.ನಾಗರಾಜ, ಎನ್ಇಎಸ್ ಕಾರ್ಯದರ್ಶಿ

ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಂ.ಎಸ್ ಅನಂತದತ್ತಾ, ಎಂ.ಆರ್.ಸೀತಾಲಕ್ಷ್ಮೀ, ಜಿ.ಎನ್.ಸುಧೀರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಸ್ವಾಗತಿಸಿ, ಪ್ರವೇಶಾತಿ ಸಮಿತಿ ಮುಖ್ಯಸ್ಥರಾದ ಡಾ.ಮೊಯಿನುದ್ದಿನ್ ಖಾನ್ ವಂದಿಸಿ, ಡಾ.ಎಚ್.ಬಿ.ಸುರೇಶ್ ನಿರೂಪಿಸಿದರು.