ಶಿವಮೊಗ್ಗ: ಯಾವುದೆ ಮುನ್ಸೂಚನೆ ನೀಡದೆ ಗ್ರಾಹಕರೊಬ್ಬರ ಒಡಿ ಖಾತೆಯಿಂದ ಲಕ್ಷಾಂತರ ರೂ. ಕಡಿತಗೊಳಿಸಿ, ಸೇವಾ ನ್ಯೂನತೆ ಎಸಗಿದ ಹೊಸನಗರದ ಕೆನರಾ ಬ್ಯಾಂಕ್ (Canara Bank) ಶಾಖೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ.
ಹೊಸನಗರ ತಾಲೂಕಿನ ಎಂ.ಗುಡ್ಡೆಕೊಪ್ಪ ನಿವಾಸಿ ಎಂ.ವಿ. ಧನಂಜಯ, ಕೆನರಾ ಬ್ಯಾಂಕ್‌ನಲ್ಲಿ ₹2.80 ಲಕ್ಷ ಮಿತಿಯ ಒಡಿ ಸೌಲಭ್ಯ ಹೊಂದಿದ್ದರು. 2024ರ ಜೂನ್‌ನಲ್ಲಿ ಬ್ಯಾಂಕ್ ಯಾವುದೆ ನೋಟಿಸ್ ನೀಡದೆ ಖಾತೆಯಿಂದ ₹3,89,544 ಹಣ ಕಡಿತಗೊಳಿಸಿತ್ತು. ಹಣ ವಾಪಸ್ ನೀಡುವಂತೆ ಮನವಿ ಮಾಡಿದ್ದರೂ, ಬ್ಯಾಂಕ್ ವ್ಯವಸ್ಥಾಪಕರು ಹಣ ಹಿಂದಿರು ಗಿಸದ ಹಿನ್ನೆಲೆಯಲ್ಲಿ ಧನಂಜಯ ಹೊಸನಗರ ಕೆನರಾ ಬ್ಯಾಂಕ್ ವಿರುದ್ಧ ಸೇವಾನ್ಯೂನತೆ ಕುರಿತು ಆಯೋಗಕ್ಕೆ ದೂರು ನೀಡಿದ್ದರು.

ಎಂ.ವಿ.ಧನಂಜಯ ಹಾಗೂ ಹೊಸನಗರ ಕೆನರಾ ಬ್ಯಾಂಕ್ ಸಲ್ಲಿಸಿದ ದಾಖಲೆ ಹಾಗೂ ವಾದ ಆಲಿಸಿದ ಆಯೋಗ, ಕಡಿತಗೊಳಿಸಿದ ₹3,89,554 ಮೊತ್ತಕ್ಕೆ ಶೇ.9ರ ಬಡ್ಡಿ ಸೇರಿಸಿ ಗ್ರಾಹಕರಿಗೆ ಮರಳಿಸಬೇಕು. ಗ್ರಾಹಕರಿಗೆ ಆಗಿರುವ ಮಾನಸಿಕ ವೇದನೆಗೆ ₹1 ಲಕ್ಷ ಮತ್ತು ಕಾನೂನು ಹೋರಾಟದ ವೆಚ್ಚವಾಗಿ ₹10 ಸಾವಿರಗಳನ್ನು ಆದೇಶದ 45 ದಿನಗಳ ಒಳಗೆ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ.ಡಿ. ಯೋಗಾನಂದ ಬಾಂಡ್ಯ ಅವರ ಪೀಠ ಆದೇಶಿಸಿದೆ. ಈ ಕುರಿತು ಆಯೋಗದ ಸಹಾಯಕ ರಿಜಿಸ್ಟ್ರಾರ್ ಎಂ.ಟಿ.ಗಂಗಾಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : MRPಗಿಂತಲು ಹೆಚ್ಚು ವಸೂಲಿ, ಫ್ಲಿಪ್‌ಕಾರ್ಟ್ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ






