ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 MAY 2021
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕು ವ್ಯಾಪಕವಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ವೇಗವಾಗಿ ಹರಡುತ್ತಿದೆ. ಮೊದಲ ಅಲೆಯಲ್ಲಿ ನಗರ ಪ್ರದೇಶದಲ್ಲಿ ಭೀತಿ ಹುಟ್ಟಿಸಿದ್ದ ಸೋಂಕು ಈಗ ಗ್ರಾಮೀಣ ಭಾಗದಲ್ಲಿ ಆತಂಕ ಮೂಡಿಸುತ್ತಿದೆ. ಹಳ್ಳಿಗಳಲ್ಲಿ ಪ್ರಕರಣ ಹೆಚ್ಚಾಗುತ್ತಿದೆ.
ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮಗಳು ಕರೋನ ಸೋಂಕಿನ ಭೀತಿ ಎದುರಿಸುತ್ತಿವೆ. ಕೆಲವು ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಆರೋಗ್ಯ ಇಲಾಖೆಗೂ ತೀವ್ರ ತಲೆನೋವು ತಂದಿದೆ.
ಬೆಂಗಳೂರಿನಿಂದ ಬಂದವರದ್ದೇ ಸಮಸ್ಯೆ
ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ರಾಜ್ಯದ ವಿವಿಧೆಡೆಯಿಂದ ಬಹುತೇಕರು ತಮ್ಮೂರಿಗೆ ಮರಳಿದರು. ಹೀಗೆ ಬಂದವರಿಂದ ಸೋಂಕು ಹಳ್ಳಿ ಹಳ್ಳಿಗೆ ತಲುಪಿದೆ ಎಂಬ ಆರೋಪವಿದೆ. ಅದರಲ್ಲೂ ಬೆಂಗಳೂರಿನಿಂದ ಬಂದವರಿಂದಲೇ ಸೋಂಕು ವ್ಯಾಪಕಗೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಈ ಕುರಿತು ತಿಳಿಸಿದ್ದರು. ಅದರ ವಿಡಿಯೋ ವರದಿ ಇಲ್ಲಿದೆ.
ಈ ಬಾರಿ ವ್ಯಾಪಕವಾಗಿ ಹರಡಿದ್ದು ಹೇಗೆ?
ಮೊದಲ ಅಲೆಯಲ್ಲಿ ಕರೋನದ ಬಗ್ಗೆ ಜನರಲ್ಲಿ ತೀವ್ರ ಭಯವಿತ್ತು. ಬೇರೆ ಊರಿನಿಂದ ಹಿಂತಿರುಗಿದವರ ಬಗ್ಗೆ ಎಚ್ಚರ ವಹಿಸುತ್ತಿದ್ದರು. ಸರ್ಕಾರವು ಇತರೆಡೆಯಿಂದ ಬಂದವರನ್ನು ಐಸೊಲೇಟ್ ಮಾಡುತ್ತಿತ್ತು. ಸೋಂಕು ಇಲ್ಲ ಎಂಬುದು ದೃಢವಾದ ಬಳಿಕವೆ ಮನೆಗೆ ಕಳುಹಿಸಲಾಗುತ್ತಿತ್ತು. ಇನ್ನು, ಸೋಂಕಿತನ ಪ್ರಾಥಮಿಕ, ದ್ವಿತೀಯ ಸಂಪರ್ಕವನ್ನು ಪತ್ತೆ ಹಚ್ಚುವ ಕಾರ್ಯವು ನಡೆಯುತ್ತಿತ್ತು. ಆದರೆ ಈ ಬಾರಿ ಇಂತಹ ಯಾವುದೆ ಪ್ರಯತ್ನವಾಗಿಲ್ಲ.
ಮದುವೆ, ಸಮಾರಂಭಗಳಿಗೆ ಬೀಳದ ಬ್ರೇಕ್
ಮದುವೆ, ಸಮಾರಂಭಗಳಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಸೀಮಿತ ಸಂಖ್ಯೆಯ ಜನರು ಭಾಗವಹಿಸಬೇಕು ಎಂದು ಆದೇಶಿಸಿದೆ. ಆದರೆ ಯಾವುದೆ ಕಾರ್ಯಕ್ರಮಗಳಿಗೂ ಬ್ರೇಕ್ ಬಿದ್ದಿಲ್ಲ. ಕರೋನ ಭಯವಿಲ್ಲದೆ, ಕದ್ದು ಮುಚ್ಚಿ ಹೆಚ್ಚು ಜನರನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಮದುವೆ ಸಮಾರಂಭದಿಂದ ಸೋಂಕು ವ್ಯಾಪಕವಾಗಿ ಹರಡಿದ್ದು, ಇಡೀ ಊರಿಗೂರೆ ಸೀಲ್ ಡೌನ್ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಉದಾಹರಣೆಯಾಗಿದೆ.
ಎಲ್ಲೆಲ್ಲಿ ವ್ಯಾಪಕವಾಗಿದೆ ಸೋಂಕು?
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಭದ್ರಾವತಿ ತಾಲೂಕು ಅರಬಿಳಚಿ, ಸಾಗರದ ಆವಿನಹಳ್ಳಿ, ಸೊರಬದ ಜಡೆ ಭಾಗದಲ್ಲಿ ಕರೋನ ಸೋಂಕು ವ್ಯಾಪಕವಾಗಿದೆ. ಈ ಭಾಗದಲ್ಲಿ ಜಾಗೃತಿ ಕಾರ್ಯಗಳನ್ನು ಬಿರುಸುಗೊಳಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ವಿವಿಧೆಡೆಯು ಸೋಂಕು ವ್ಯಾಪಕವಾಗುತ್ತಿದೆ.
ಶೇ.40ರಷ್ಟು ಪಾಸಿಟಿವ್ ಕೇಸ್
ಗ್ರಾಮೀಣ ಭಾಗದಲ್ಲಿ ಕರೋನ ವ್ಯಾಪಕವಾಗಿ ಅಬ್ಬರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಕಳೆದ ವಾರದ ಹೊತ್ತಿಗೆ ಶೇ.45 ರಿಂದ ಶೇ.47ರವರೆಗೆ ಇತ್ತು. ಈಗ ಶೇ.39 ರಿಂದ 40ಕ್ಕೆ ಇಳಿಕೆಯಾಗಿದೆ. ಆದರೆ ಇದು ಇನ್ನಷ್ಟು ತಗ್ಗಬೇಕಿದೆ. ಈ ಕುರಿತು ಪ್ರಯತ್ನಗಳನ್ನು ಮಾಡಲಾಗುತಿದೆ’ ಎಂದು ತಿಳಿಸಿದರು.
ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡದಂತೆ ತಡೆಯಲು ಗ್ರಾಮೀಣ ಭಾಗದಲ್ಲೂ ಜನರು ಜಾಗೃತರಾಗಬೇಕಿದೆ. ಕೋವಿಡ್ ನಿಯಮಗಳನ್ನು ಪಾಲಿಸಬೇಕಿದೆ. ಅಲ್ಲದೆ ಇತರೆ ಊರುಗಳಿಂದ ಬಂದವರು ಗ್ರಾಮಸ್ಥರಿಂದ ಸ್ವಲ್ಪ ದೂರ ಉಳಿಯಬೇಕಾದ್ದು ಅನಿವಾರ್ಯವಾಗಿದೆ. ಮತ್ತೊಂದೆಡೆ ಸರ್ಕಾರವು ಜಾಗೃತಿ ಹೆಚ್ಚಿಸಬೇಕಿದೆ. ಲಸಿಕೆ ಪ್ರಮಾಣವನ್ನು ಹೆಚ್ಚಿಸಬೇಕಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422