SHIVAMOGGA LIVE NEWS | PETROL | 30 ಮೇ 2022
ಪೆಟ್ರೋಲ್ ಬಂಕ್ ಮಾಲೀಕರು ಒಂದು ದಿನ ಪೆಟ್ರೋಲ್ ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ವಿವಿಧ ಪೆಟ್ರೋಲ್ ಬಂಕ್’ಗಳಲ್ಲಿ ಇವತ್ತು ಇಂಧನಕ್ಕಾಗಿ ಜನರು ಮುಗಿಬಿದ್ದರು.
ಒಂದು ದಿನದ ಮುಷ್ಕರದಿಂದಾಗಿ ಮೂರ್ನಾಲ್ಕು ದಿನ ಪೆಟ್ರೋಲ್, ಡಿಸೇಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಈ ಹಿನ್ನೆಲೆ ಜನರು ಪೆಟ್ರೋಲ್, ಡಿಸೇಲ್’ಗೆ ಮುಗಿಬಿದ್ದರು. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಪೆಟ್ರೋಲ್ ಬಂಕ್ ಒಂದರಲ್ಲಿ ದೊಡ್ಡ ಕ್ಯಾನ್’ಗಳನ್ನು ತಂದು ಪೆಟ್ರೋಲ್, ಡಿಸೇಲ್ ತುಂಬಿಸಿಕೊಂಡರು.
ನಗರ ಪ್ರದೇಶದಲ್ಲೂ ಜನರು ಹೆಚ್ಚುವರಿ ಪ್ರಮಾಣದಲ್ಲಿ ವಾಹನಗಳಿಗೆ ಇಂಧನ ಭರ್ತಿ ಮಾಡಿಸಿಕೊಂಡರು. ನಿಗದಿಗಿಂತಲೂ ಹೆಚ್ಚಿನ ಗ್ರಾಹಕರು ಇವತ್ತು ಪೆಟ್ರೋಲ್ ಬಂಕ್’ಗಳಲ್ಲಿ ಕಾಣಿಸಿದರು.
ಹಳ್ಳಿಗಳಲ್ಲಿ ಡಿಮಾಂಡಪ್ಪೊ, ಡಿಮಾಂಡ್
ಮುಂಗಾರು ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಮಳೆಯಾಗಿದೆ. ಕೃಷಿ ಚಟುವಟಿಕೆ ಗರಿಗೆದರಿದೆ. ಮುಂಗಾರು ಹಂಗಾಮಿನ ಸಿದ್ಧತೆ ಆರಂಭವಾಗಿದೆ. ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳಲು ಟ್ರಾಕ್ಟರ್, ಟಿಲ್ಲರ್ ಬಳಕೆ ಮಾಡಲಾಗುತ್ತಿದೆ. ಡಿಸೇಲ್ ಸಿಗದಿದ್ದರೆ ಕೆಲಸ ವಿಳಂಬವಾಗಲಿದೆ. ಹಾಗಾಗಿ ಡಿಸೇಲ್’ಗೆ ಹೆಚ್ಚ ಡಿಮಾಂಡ್ ಇದೆ.
ಬಂಕ್ ಬಂದ್ ಆಗಿ, ಮೂರ್ನಾಲ್ಕು ದಿನ ಡಿಸೇಲ್ ಪೂರೈಕೆ ವ್ಯತ್ಯಯ ಉಂಟಾದರೆ ಕೃಷಿ ಚಟುವಟಿಕೆಗೆ ತೀವ್ರ ಸಮಸ್ಯೆ ಆಗಲಿದೆ. ಆದ್ದರಿಂದ ರೈತರು, ಟ್ರಾಕ್ಟರ್ ಮತ್ತು ಟಿಲ್ಲರ್ ಮಾಲೀಕರು ಹೆಚ್ಚುವರಿ ಡಿಸೇಲ್ ಖರೀದಿಸುತ್ತಿದ್ದಾರೆ. ಇದೆ ಕಾರಣಕ್ಕೆ ದೊಡ್ಡ ಕ್ಯಾನ್’ಗಳಲ್ಲಿ ಡಿಸೇಲ್ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.
ಫುಲ್ ಟ್ಯಾಂಕ್ ಪೆಟ್ರೋಲ್
ಮತ್ತೊಂದೆಡೆ ಇವತ್ತು ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಳ್ಳುವವರ ಸಂಖ್ಯೆಯು ಹೆಚ್ಚಾಗಿದೆ. ಮೂರ್ನಾಲ್ಕು ದಿನ ಪೆಟ್ರೋಲ್ ಅಭಾವದ ಭೀತಿಯಲ್ಲಿ, ಬೈಕ್ ಸವಾರರು ಹೆಚ್ಚುವರಿ ಪೆಟ್ರೋಲ್ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.
ಮುಷ್ಕರ ಮಾಡಲು ಕಾರಣವೇನು?
ಏಕಾಏಕಿ ತೈಲ ದರ ಏರಿಕೆಯಿಂದ ಬಂಕ್ ಮಾಲೀಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಇನ್ನು, ಪೆಟ್ರೋಲ್, ಡಿಸೇಲ್ ಮಾರಾಟದ ಮೇಲೆ 1 ರೂ. ಕಮಿಷನ್ ನೀಡುವಂತೆ ಆಗ್ರಹಿಸಿದ ಪೆಟ್ರೋಲ್ ಬಂಕ್ ಮಾಲೀಕರು ಒಂದು ದಿನ ಪೆಟ್ರೋಲ್ ಖರೀದಿ ಮಾಡದಿರಲು ನಿರ್ಧರಿಸಿದ್ದಾರೆ. ಖಾಸಗಿ ಪೆಟ್ರೋಲ್ ಬಂಕ್’ಗಳಾದ ಶೆಲ್ ಸೇರಿದಂತೆ ಹಲವು ಖಾಸಗಿ ಬಂಕ್’ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ – ಕಾರಿಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಲಾರಿ, ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.