ಜೋಗ ಬಳಿ ಜಲವಿದ್ಯುದಾಗರದ ಮೇಲೆ ರಾತ್ರಿ ಡ್ರೋನ್‌ ಹಾರಾಟ, ತನಿಖೆ ಚುರುಕು

ಸಾಗರ: ಜೋಗದ ಶರಾವತಿ ಕಣಿವೆ ಕೊಳ್ಳದಲ್ಲಿರುವ ಜಲವಿದ್ಯುದಾಗರದ ಮೇಲ್ಭಾಗ ಸೆಪ್ಟೆಂಬರ್ 27ರ ರಾತ್ರಿ 8.30ರ ಹೊತ್ತಿಗೆ ಡ್ರೋನ್ ಹಾರಾಟ ನಡೆಸಲಾಗಿದೆ.. ಈ ಕುರಿತು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿ) ಭದ್ರತಾ ವಿಭಾಗವು ಆಂತರಿಕ ತನಿಖೆ ಕೈಗೊಂಡಿದೆ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 4 ಪ್ಯಾರಾಗಳು ಕೆಳಗಿವೆ)

ವಡನ್‌ಬೈಲು ಮಾರ್ಗದ ಸರ್ಜ್ ಟ್ಯಾಂಕ್ ಸಮೀಪ ಡ್ರೋನ್ ಹಾರಾಡಿದ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತಿದೆ. ಶರಾವತಿ ಕೊಳ್ಳದ ಚಿತ್ರೀಕರಣಕ್ಕಾಗಿ ಯೂಟ್ಯೂಬರ್‌ಗಳು ಅಥವಾ ಪ್ರವಾಸಿಗರು ಮಾವಿನಗುಂಡಿ ಕಡೆಯಿಂದ ಹಾರಾಟ ನಡೆಸಿದ್ದಾರೆಯೇ ಅಥವಾ ಇತರ ಯಾರಾದರೂ ನಿಗೂಢವಾಗಿ ಹಾರಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Sharavathi-Hydro-Power-Project-near-jog-falls-in-Shivamogga

ಸದ್ಯ ಕೆಪಿಸಿ ನಿಗಮದಿಂದ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ನಿಗಮದ ಭದ್ರತಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಪ್ರದೇಶದ ಮೇಲೆ ಕಾರ್ಗಲ್‌ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಕಾರ್ಗಲ್, ಲಿಂಗನಮಕ್ಕಿ ಹಾಗೂ ಜೋಗ ವ್ಯಾಪ್ತಿಯಲ್ಲಿ ಯುಟ್ಯೂಬರ್‌ಗಳಿಂದ ಡ್ರೋನ್ ಬಳಕೆ ಹೆಚ್ಚಾಗಿದೆ. ಜಲವಿದ್ಯುತ್ ಉತ್ಪಾದನಾ ಘಟಕವಿರುವ ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್‌ ಹಾರಿಸುವವರ ವಿವರಗಳನ್ನು ಸಂಗ್ರಹಿಸಿ ಪೊಲೀಸರು ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.