ಶಿವಮೊಗ್ಗ: ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸಲು ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ನವೆಂಬರ್ 30ರ ಒಳಗೆ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 56 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇ-ಕೆವೈಸಿ ಮಾಡಿಸಿ ಐದು ವರ್ಷ, ಒಂದು ವರ್ಷ ಪೂರೈಸಿರುವವರು ಹಾಗೂ ಈವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಕ್ಷಣವೇ ಈ ಪ್ರಕ್ರಿಯೆ ಮುಗಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇ-ಕೆವೈಸಿ ಬಾಕಿ ವಿವರ
- ಜಿಲ್ಲೆಯಲ್ಲಿ ಇ-ಕೆವೈಸಿ ಮಾಡಿಸಿ ಐದು ವರ್ಷ ಪೂರೈಸಿರುವ 7,90,815 ಫಲಾನುಭವಿಗಳ ಪೈಕಿ 6,71,681 ಜನರು ಪ್ರಕ್ರಿಯೆ ಪೂರ್ಣಗೊಳಿಸಿದ್ದು, 1,19,134 ಜನರ ಇ-ಕೆವೈಸಿ ಬಾಕಿಯಿದೆ.
- ಒಂದು ವರ್ಷ ಪೂರೈಸಿರುವ 4,00,444 ಫಲಾನುಭವಿಗಳ ಪೈಕಿ 5,574 ಜನರು ಇ-ಕೆವೈಸಿ ಮಾಡಿಸಿದ್ದು, 3,94,870 ಜನರ ಪ್ರಕ್ರಿಯೆ ಬಾಕಿಯಿದೆ.
- ಒಮ್ಮೆಯೂ ಇ-ಕೆವೈಸಿ ಮಾಡಿಸದ 19,065 ಫಲಾನುಭವಿಗಳಲ್ಲಿ 3,782 ಜನರು ಮಾತ್ರ ಪ್ರಕ್ರಿಯೆ ಮುಗಿಸಿದ್ದು, ಇನ್ನು 15,283 ಫಲಾನುಭವಿಗಳು ಬಾಕಿಯಿದ್ದಾರೆ.
ಇ-ಕೆವೈಸಿ ಮಾಡಿಸುವುದು ಹೇಗೆ?
ಉಳಿದಿರುವ ಎಲ್ಲಾ ಫಲಾನುಭವಿಗಳು ನವೆಂಬರ್ 30ರ ಒಳಗೆ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಅನ್ನ ಸೇವೆ ಮೊಬೈಲ್ ಆ್ಯಪ್ ಮೂಲಕವೂ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಸಮಸ್ಯೆಗಳಿದ್ದಲ್ಲಿ ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿ ಅಥವಾ ಶಿವಮೊಗ್ಗ ಹಾಗೂ ಭದ್ರಾವತಿ ನಗರದ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.