ಶಿವಮೊಗ್ಗ: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಎಲ್-ನಿನೋ ಕಾರಣದಿಂದಾಗಿ ಮಳೆಯ ಪ್ರಮಾಣ ವಾಡಿಕೆಗಿಂತ ಶೇ 10ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ರೈತರು ಹವಾಮಾನ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಬಿತ್ತನೆ ಹಾಗೂ ಇತರೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿದೆ.
ಜಿಲ್ಲೆಯಲ್ಲಿ ಈಗಾಗಲೇ ಭತ್ತ, ಮುಸುಕಿನ ಜೋಳ ಹಾಗೂ ಅಲ್ಪ ಪ್ರಮಾಣದಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಆದರೆ, ಬೀಜಗಳನ್ನು ಬಿತ್ತುವ ಮುನ್ನ ಆಯಾ ಬೆಳೆಗೆ ಅನುಗುಣವಾಗಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರುವುದನ್ನು ಖಾತರಿ ಪಡಿಸಿಕೊಂಡೇ ರೈತರು ಬಿತ್ತನೆ ಮಾಡಬೇಕು ಎಂದು ಇಲಾಖೆ ತಿಳಿಸಿದೆ.

ರಸಗೊಬ್ಬರ ಬಳಕೆ ಸಂಬಂಧ ಸೂಚನೆ
ರೈತರು ಸಾಮಾನ್ಯವಾಗಿ ಸಾರಜನಕ (ಯೂರಿಯಾ) ಹಾಗೂ ರಂಜಕಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಇದರಲ್ಲಿ ಪೊಟ್ಯಾಷ್ ಅಂಶ ಇರುವುದಿಲ್ಲ. ಪೊಟ್ಯಾಷ್ ಪೋಷಕಾಂಶವು ಬೆಳೆಗಳಿಗೆ ರೋಗ ಮತ್ತು ಕೀಟ ಬಾಧೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಕಾಳುಗಳನ್ನು ಸದೃಢಗೊಳಿಸಿ, ಹೆಚ್ಚು ತೂಕ ಬರುವಂತೆ ಮಾಡುವ ಮೂಲಕ ಉತ್ತಮ ಇಳುವರಿ ನೀಡುತ್ತದೆ. ಆದ್ದರಿಂದ ಬಿತ್ತನೆ ಸಮಯದಲ್ಲಿ ಸಾರಜನಕ, ರಂಜಕದ ಜೊತೆಗೆ ಕಡ್ಡಾಯವಾಗಿ ಪೊಟ್ಯಾಷ್ ಪೋಷಕಾಂಶ ಹೊಂದಿರುವ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನೇ ಬಳಸಬೇಕು ಎಂದು ಸಲಹೆ ನೀಡಲಾಗಿದೆ.
ರೈತರು ಅಧಿಕೃತ ಮಾರಾಟಗಾರರಿಂದ ಕಡ್ಡಾಯವಾಗಿ ಬಿಲ್ ಪಡೆದೇ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ಖರೀದಿಸಬೇಕು.
– ಕಿರಣ್ ಕುಮಾರ್, ಜಂಟಿ ಕೃಷಿ ನಿರ್ದೇಶಕ
ಮಾರುಕಟ್ಟೆಯಲ್ಲಿ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟ ಕಂಡುಬಂದಲ್ಲಿ ತಕ್ಷಣವೇ ಕೃಷಿ ಇಲಾಖೆಗೆ ದೂರು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.