ಮೈಸೂರಿನಲ್ಲಿ ಅಂಬಾರಿ ಹೊರಲಿರುವ ಪ್ರಶಾಂತ ಆನೆಗೆ ಶಿವಮೊಗ್ಗದ ನಂಟು, ಏನದು?

ಶಿವಮೊಗ್ಗ: ಮೈಸೂರು ದಸರಾದಲ್ಲಿ ಅಂಬಾರಿ ಹೊರಲು ಈ ಬಾರಿ ದುಬಾರೆ ಆನೆ ಬಿಡಾರದ ಪ್ರಶಾಂತ ಆನೆ ಆಯ್ಕೆಯಾಗಿದೆ. ಶಾಂತ ಸ್ವಭಾವದ ಪ್ರಶಾಂತ ಆನೆಗೆ ಶಿವಮೊಗ್ಗದ ನಂಟು ಇದೆ. ಪಶ್ಚಿಮ ಘಟ್ಟ ಕಾಡಿನಲ್ಲಿ ವಿಹರಿಸಿದ ಅನುಭವವಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

54 ವರ್ಷ ಪ್ರಶಾಂತ ಆನೆ ಇದೇ ಮೊದಲ ಬಾರಿ ವಿಶ್ವವಿಖ್ಯಾತ ದಸರಾದಲ್ಲಿ ಅಂಬಾರಿ ಹೊರಲಿದೆ. ಆರು ವರ್ಷ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆಗೆ 60 ವರ್ಷ ತುಂಬಿದ ಹಿನ್ನೆಲೆ ಆತನಿಗೆ ವಿಶ್ರಾಂತಿ ನೀಡಲಾಗಿದೆ. ಅಂಬಾರಿ ಹೊರಲು ಹೊಸ ಆನೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು.

Prashantha-Elephant-in-Mysore

ಮೂರರ ಪೈಕಿ ಪ್ರಶಾಂತ ಆಯ್ಕೆ

ಮಹೇಂದ್ರ, ಧನಂಜಯ ಮತ್ತು ಪ್ರಶಾಂತ ಆನೆಗಳ ಪೈಕಿ ಒಂದು ಆನೆಯ ಮೇಲೆ ಅಂಬಾರಿ ಹೊರಿಸಲು ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಮರದ ಅಂಬಾರಿ ಹೊತ್ತು 11 ಕಿ.ಮೀ ದೂರ ನಡೆಯುವ ತಾಲೀಮು ನಡೆಯುತ್ತಿತ್ತು. ಆದರೆ ಮಹೇಂದ್ರ ಆನೆ ಎರಡು ಬಾರಿ ಮರದ ಅಂಬಾರಿ ಹೊತ್ತು ಬನ್ನಿಮಂಟಪ ಸೇರುವಲ್ಲಿ ವಿಫಲವಾಯಿತು. ಇನ್ನು, ಧನಂಜಯ ಆನೆ ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊರಲು ಆಯ್ಕೆಯಾಗಿದೆ. ಹೀಗಾಗಿ ಚಿನ್ನದ ಅಂಬಾರಿ ಹೊರಲು ಪ್ರಶಾಂತ ಆನೆಯನ್ನು ಆಯ್ಕೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ನಂಟು

ಪ್ರಶಾಂತ ಆನೆಗೆ ದಸರಾದ ಜಂಬೂ ಸವಾರಿ ಹೊಸತೇನಲ್ಲ. ಸತತ 18 ವರ್ಷದಿಂದ ಜಂಬೂ ಸವಾರಿಯಲ್ಲಿ ಸಾಲಾನೆಯಾಗಿ ಭಾಗವಹಿಸುತ್ತಿತ್ತು. ಆದರೆ ಇದೇ ಮೊದಲ ಬಾರಿ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಸಾಗಲಿದೆ. “ಪ್ರಶಾಂತ ಆನೆಯನ್ನು ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ವ್ಯಾಪ್ತಿಯಲ್ಲಿ 1993ರಲ್ಲಿ ಸೆರೆ ಹಿಡಿದಿರುವುದಾಗಿ” ಮೈಸೂರು ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸದ್ಯ ಪ್ರಶಾಂತ ಆನೆಯು ವಿಶ್ವವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರಲಿರುವ 13ನೇ ಆನೆಯಾಗಿದೆ. ಜಯಮಾರ್ತಾಂಡ ಆನೆಯು 45 ವರ್ಷ ಅಂಬಾರಿ ಹೊತ್ತಿತ್ತು. ನಂತರ ವಿಜಯ ಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್ ರಾಜ್, ಐರಾವತ, ಬಿಳಿಗಿರಿ ಆನೆಗಳು ಅಂಬಾರಿಯಲ್ಲಿ ಮಹಾರಾಜರನ್ನು ಹೊತ್ತು ಸಾಗಿದ್ದವು. 1977ರಿಂದ ಚಿನ್ನದ ಅಂಬಾರಿಯಲ್ಲಿ ಚಾಮುಂಡಿ ವಿಗ್ರಹವನ್ನು ಇರಿಸಿ ಮೆರವಣಿಗೆ ಮಾಡಲಾಯಿತು. ರಾಜೇಂದ್ರ ಆನೆ ಮೊದಲ ಬಾರಿ ಚಾಮುಂಡಿಯನ್ನು ಹೊತ್ತು ಸಾಗಿತು. ದ್ರೋಣ ಆನೆಯು 18 ಬಾರಿ, ಬಲರಾಮ ಆನೆಯು 14 ವರ್ಷ, ಅರ್ಜುನ ಆನೆಯು 8 ವರ್ಷ, ಅಭಿಮನ್ಯು ಆನೆಯು 6 ಬಾರಿ ಅಂಬಾರಿ ಹೊತ್ತು ಸಾಗಿತ್ತು. ಈಗ ಪ್ರಶಾಂತ ಆನೆ ಆಂಬಾರಿ ಹೊರಲು ಸಿದ್ಧವಾಗಿದೆ.