BREAKING NEWS – ಉಗ್ರರ ಜಾಲ, ತಪ್ಪೊಪ್ಪಿಕೊಂಡ ಶಿವಮೊಗ್ಗದ ಇಬ್ಬರಿಗೆ ಶಿಕ್ಷೆ ಪ್ರಕಟ

 ಶಿವಮೊಗ್ಗ  LIVE 

ಬೆಂಗಳೂರು: ಐಸಿಸ್‌ ಉಗ್ರ ಸಂಘಟನೆಯ ಶಿವಮೊಗ್ಗ ಜಾಲ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಾಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯದ ನ್ಯಾ.ಕೆಂಪರಾಜು ಅವರು ಇಬ್ಬರು ಅಪರಾಧಿಗಳಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಆರೋಪಿ 8 ಜಬೀವುಲ್ಲಾ ಮತ್ತು ಆರೋಪಿ 9 ನದೀಮ್‌ ಫೈಸಲ್‌ಗೆ ಶಿಕ್ಷೆಯಾಗಿದೆ.

ಏನಿದು ಪ್ರಕರಣ?

2022ರ ಆಗಸ್ಟ್‌ 15ರಂದು ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್‌ ಎಂಬುವವರಿಗೆ ಮಾರಕಾಸ್ತ್ರದಿಂದ ಇರಿಯಲಾಗಿತ್ತು. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತೀರ್ಥಹಳ್ಳಿಯ ಮೊಹಮ್ಮದ್‌ ಶಾರೀಕ್‌, ಆತನ ಸಹಚರರಾದ ಮಾಜ್‌ ಮುನೀರ್‌ ಅಹಮದ್‌, ಸಯ್ಯದ್‌ ಯಾಸೀನ್‌ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವುದು ಗೊತ್ತಾಗಿತ್ತು. ಮೊಹಮ್ಮದ್‌ ಶಾರೀಕ್‌ ಐಸಿಸ್‌ ಉಗ್ರ ಸಂಘಟನೆಯನ್ನು ವಿಸ್ತರಿಸಲು ಜಬೀವುಲ್ಲಾ ಮತ್ತು ನದೀಮ್‌ ಫೈಸಲ್‌ ಎಂಬುವವನ್ನು  ನೇಮಿಸಿಕೊಂಡಿದ್ದ ಎಂದು ತನಿಖೆ ವೇಳೆ ಗೊತ್ತಾಗಿತ್ತು.

ಎನ್‌ಐಎಗೆ ಪ್ರಕರಣ ಹಸ್ತಾಂತರ

ಪ್ರೇಮ್‌ ಸಿಂಗ್‌ಗೆ ಇರಿತ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತುಂಗಾ ನದಿ ದಂಡೆ ಮೇಲೆ ಟ್ರಯಲ್‌ ಬ್ಲಾಸ್ಟ್‌, ಭಾರತದ ಧ್ವಜ ಸುಟ್ಟ ಪ್ರಕರಣ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊನೆಗೆ ಈ ಪ್ರಕರಣಗಳು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವರ್ಗವಾಗಿದ್ದವು. ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

NIA

ಜಬೀವುಲ್ಲಾ, ಫೈಸಲ್‌ಗೆ ಶಿಕ್ಷೆ ಪ್ರಕಟ

ಮೊಹಮ್ಮದ್‌ ಶಾರೀಕ್‌ನ ಸಹಚರರಾದ ಜಬೀವುಲ್ಲಾ ಮತ್ತು ಫೈಸಲ್‌ ತಪ್ಪೊಪ್ಪಿಕೊಂಡಿರುವ ಹಿನ್ನೆಲೆ ಇಬ್ಬರಿಗು ಎನ್‌ಐಎ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ವಿವಿಧ ಸೆಕ್ಷನ್‌ಗಳ ಅಡಿ ಆರು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹59,000 ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ ಅವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಐಸಿಸ್‌ ಸಂಘಟನೆ, ಇಬ್ಬರ ಪಾತ್ರವೇನು?

ಮೊಹಮ್ಮದ್‌ ಶಾರೀಕ್ 2022ರ ಮಂಗಳೂರು ಆಟೋ ಸ್ಪೋಟ ಪ್ರಕರಣ ಪ್ರಮುಖ ಆರೋಪಿ ಮತ್ತು ಆ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ .‌ ಈತ ಮೂಲತಃ ತೀರ್ಥಹಳ್ಳಿಯವನು. ಮೊಹಮ್ಮದ್‌ ಶಾರೀಕ್‌ ಐಸಿಸ್‌ ಉಗ್ರ ಸಂಘಟನೆಯ ಕಾರ್ಯಚಟುವಟಿಕೆ ವಿಸ್ತರಿಸಲು ಜಬೀವುಲ್ಲಾನನ್ನು ನೇಮಿಸಿಕೊಂಡಿದ್ದ. ಶಾರೀಕ್‌ನ ಸೂಚನೆ ಮೇರೆಗೆ ಜಬೀವುಲ್ಲಾ ಆತನ ಸ್ನೇಹಿತ ನದೀಮ್‌ ಫೈಸಲ್‌ನನ್ನು ತನ್ನ ಕೃತ್ಯಕ್ಕೆ ನೇಮಿಸಿಕೊಂಡಿದ್ದ.

ಇದನ್ನೂ ಓದಿ » ಟ್ರಾಫಿಕ್‌ ಫೈನ್‌ ಬಾಕಿ ಇದ್ಯಾ? ಮತ್ತೆ ಆಫರ್‌ ನೀಡಿದ ಸರ್ಕಾರ

ವಿಧ್ವಂಸಕ ಕೃತ್ಯ ನಡೆಸಲು ಈ ಮೂವರು ಸ್ಥಳ ಪರಿಶೀಲಿಸಿದ್ದರು. ಇದೇ ಸಂಚಿನ ಭಾಗವಾಗಿ ಇವರು 2022ರ ಆಗಸ್ಟ್‌ 15ರಂದು ಪ್ರೇಮ್‌ ಸಿಂಗ್‌ಗೆ ಚಾಕು ಇರಿದಿದ್ದರು. ಸ್ಪೋಟಕ ತಯಾರಿಗೆ ಅನುಕೂಲವಾಗಲು ಶಾರೀಕ್‌ಗೆ ಈ ಇಬ್ಬರು ಭಾರಿ ಪ್ರಮಾಣದಲ್ಲಿ ಬೆಂಕಿ ಪೊಟ್ಟಣಗಳನ್ನು ಒದಗಿಸಿದ್ದರು. ಜಬೀವುಲ್ಲಾ ಮತ್ತು ನದೀಮ್‌ ಫೈಸಲ್‌ಗೆ ಶಾರೀಕ್‌ ಹಣಕಾಸು ನೆರವನ್ನು ಒದಗಿಸಿದ್ದ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು, ಜಬೀವುಲ್ಲಾ ಮತ್ತು ನದೀಮ್‌ ಫೈಸಲ್‌ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ವಿಧ್ವಂಸಕ ಕೃತ್ಯಕ್ಕೆ ಪ್ರಚೋದಿಸುವ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿಸಲಾಗಿದೆ.

ಸದ್ಯ ಜಬೀವುಲ್ಲಾ ವಿಜಯಪುರ ಜೈಲಿನಲ್ಲಿದ್ದಾನೆ. ನದೀಮ್‌ ಫೈಸಲ್‌ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಇಬ್ಬರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸಲು ಆದೇಶದಲ್ಲಿ ತಿಳಿಸಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment