ನವದೆಹಲಿ: ಬ್ಯಾಂಕ್ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಸೆಪ್ಟೆಂಬರ್ 28ರಿಂದ 30ರವರೆಗೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ ನಡೆಸಲಾಗುತ್ತಿದೆ. ಇದರಿಂದ ದೇಶಾದ್ಯಂತ ಬ್ಯಾಂಕಿಂಗ್ ಸೇವೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಸತತ 5 ದಿನಗಳ ಬ್ಯಾಂಕ್ಗಳು ಬಂದ್
ಸೆಪ್ಟೆಂಬರ್ 26ರಂದು ನಾಲ್ಕನೇ ಶನಿವಾರ ಮತ್ತು ಸೆಪ್ಟೆಂಬರ್ 27ರಂದು ಭಾನುವಾರ ಬ್ಯಾಂಕ್ಗಳಿಗೆ ಎಂದಿನಂತೆ ರಜಾ ದಿನ. ಇದರ ಬೆನ್ನಲ್ಲೇ ಸೆಪ್ಟೆಂಬರ್ 28, 29 ಮತ್ತು 30 ರಂದು ಮುಷ್ಕರ ನಡೆಯಲಿದೆ. ಹೀಗಾಗಿ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಕಾರ್ಯಾಚರಣೆಗೆ ಅಡಚಣೆ ಎದುರಾಗಬಹುದು. ಇನ್ನು, ಸೆಪ್ಟೆಂಬರ್ ತಿಂಗಳಖ ಕೊನೆಯಲ್ಲಿ ಮುಷ್ಕರ ನಡೆಸುತ್ತಿರುವುದು ಬ್ಯಾಂಕಿಂಗ್ ಕ್ಷೇತ್ರದ ಅರ್ಧವಾರ್ಷಿಕ ಖಾತೆಗಳ ಮುಕ್ತಾಯದ ಮೇಲೆಯೂ ಪರಿಣಾಮ ಬೀರುವ ಆತಂಕವಿದೆ.

ಬ್ಯಾಂಕ್ ನೌಕರರ ಬೇಡಿಕೆಗಳೇನು?
ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪ್ರತಿನಿಧಿಸುವ 7 ಪ್ರಮುಖ ಸಂಘಟನೆಗಳ ಒಕ್ಕೂಟವಾದ ಕೇಂದ್ರ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇರಿಸಿವೆ.
- ಮಾರ್ಚ್ 2024ರಲ್ಲಿ ಅಂತಿಮಗೊಂಡ 12ನೇ ದ್ವಿಪಕ್ಷೀಯ ಒಪ್ಪಂದದಂತೆ ಎಲ್ಲ ಶನಿವಾರಗಳನ್ನು ರಜೆ ಎಂದು ಘೋಷಿಸಬೇಕು. ತಕ್ಷಣ ವಾರದ 5 ದಿನಗಳ ಕೆಲಸದ ಪದ್ಧತಿ ಜಾರಿಗೆ ತರಬೇಕು.
- ನಿವೃತ್ತ ನೌಕರರಿಗೆ ಏಕರೂಪದ ತುಟ್ಟಿ ಭತ್ಯೆ ಹಾಗೂ ಪಿಂಚಣಿ ನವೀಕರಣ.
- ರಾಷ್ಟ್ರೀಯ ಪಿಂಚಣಿ ಯೋಜನೆಯ ಅಡಿಯಲ್ಲಿರುವ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆಗೆ ಮರಳಲು ಅವಕಾಶ ನೀಡಬೇಕು.
- ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ನಿಯಮಗಳಲ್ಲಿನ ಏಕಪಕ್ಷೀಯ ತಿದ್ದುಪಡಿ ಸರಿಪಡಿಸಬೇಕು.
ಸೆಪ್ಟೆಂಬರ್ 11 ರಂದು ಮುಷ್ಕರ ನಡೆಸಿದ್ದ ಒಕ್ಕೂಟವು, ಸಮಸ್ಯೆ ಬಗೆಹರಿಯದಿದ್ದರೆ ಅಕ್ಟೋಬರ್ 26 ರಿಂದ ನಿರಂತರ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದವು.
ಗ್ರಾಹಕರಿಗೆ ತಟ್ಟಲಿದೆ ಬಿಸಿ
ಬ್ಯಾಂಕ್ ನೌಕರರ ಮುಷ್ಕರಿಂದ ಬ್ಯಾಂಕಿಂಗ್ ಸೌಲಭ್ಯದಲ್ಲಿ ವ್ಯತ್ಯಯವಾಗಲಿದೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ಜಾಗೃತಿ ಸೂಚನೆಯನ್ನು ಬಿಡುಗಡೆ ಮಾಡಿವೆ. ವಹಿವಾಟು ಮುಂಚಿತವಾಗಿ ಪೂರ್ಣಗೊಳಿಸಿ, ಡಿಜಿಟಲ್ ಸೇವೆ, ಎಟಿಎಂ ಸೇವೆ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿವೆ.
ಕೇಂದ್ರ ಸರ್ಕಾರ ಮಧ್ಯಪ್ರವೇಶ
ಮುಷ್ಕರಕ್ಕೆ ಮುಂದಾಗದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿದೆ. ಹಣಕಾಸು ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಮುಖ್ಯಸ್ಥರ ಜತೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಮುಷ್ಕರವನ್ನು ಹಿಂಪಡೆಯುವಂತೆ ಸರ್ಕಾರ ಮನವಿ ಮಾಡಿದೆ.