SHIVAMOGGA LIVE | 27 JUNE 2023
SHIMOGA : ಕಳೆದ ಎರಡು ದಿನ ದಟ್ಟ ಮೋಡದೊಂದಿಗೆ ಕಾಣಿಸಿಕೊಂಡಿದ್ದ ವರುಣ (Rain) ಮತ್ತೆ ನಾಪತ್ತೆಯಾಗಿದ್ದಾನೆ. ಭೂಮಿ ಹದ ಮಾಡಿಟ್ಟುಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ಪುನಃ ಆಗಸದತ್ತ ಮುಖ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ದಟ್ಟ ಮೋಡ ಮತ್ತು ತುಂತುರು ಮಳೆಯಾಗಿತ್ತು. ಆದರೆ ಸೋಮವಾರ ಬಿಸಿಲು ಆವರಿಸಿ ಮಳೆಯ ಸೂಚನೆ ಕಾಣದಂತಾಯಿತು. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ನಿರೀಕ್ಷೆಯಂತೆ ಸುರಿಯದ ಮಳೆ
ವಿಳಂಬವಾಗಿ ಆಗಮಿಸಿದ ಮುಂಗಾರು (Monsoon) ಈಗಾಗಲೆ ರಾಜ್ಯವನ್ನು ವ್ಯಾಪಿಸಿದೆ. ವಿವಿಧೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಮತ್ತು ಎಚ್ಚರಿಕೆಯನ್ನು ನೀಡಿತ್ತು. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗು ನಿರೀಕ್ಷಿತ ಮಳೆಯಾಗಿಲ್ಲ. ಹಾಗಾಗಿ ಕೆರೆಗಳಲ್ಲಿ ನೀರು ಕಡಿಮೆಯಾಗಿದೆ. ಜಲಾಶಯಗಳ ನೀರಿನ ಮಟ್ಟ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ.
ವಾಡಿಕೆಗಿಂತ ಭಾರಿ ಕಡಿಮೆ ಮಳೆ
ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಮಳೆ (Rain) ಪ್ರಮಾಣ ಭಾರಿ ಕುಸಿತ ಕಂಡಿದೆ. ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಶೇ.78ರಷ್ಟು ಮಳೆ ಕೊರತೆಯಾಗಿದೆ. ಜೂನ್ ತಿಂಗಳಲ್ಲಿ ಈವರೆಗು 84 ಮಿ.ಮೀ ಮಾತ್ರ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ಈವರೆಗು ಶೇ.63ರಷ್ಟು ಮಳೆ ಕೊರತೆಯಾಗಿದೆ. ತೀರ್ಥಹಳ್ಳಿಯಲ್ಲಿ ಶೇ.77, ಹೊಸನಗರದಲ್ಲಿ ಶೇ.80, ಸಾಗರದಲ್ಲಿ ಶೇ.62, ಸೊರಬದಲ್ಲಿ ಶೇ.79, ಶಿಕಾರಿಪುರದಲ್ಲಿ ಶೇ.83, ಭದ್ರಾವತಿಯಲ್ಲಿ ಶೇ. 31ರಷ್ಟು ಮಳೆ ಕೊರತೆಯಾಗಿದೆ.
ಬಹು ಹೊತ್ತು ಉಳಿಯದ ಸಂತಸ
ಜೂ.24 ಮತ್ತು 25ರಂದು ಜಿಲ್ಲೆಯಲ್ಲಿ ದಟ್ಟ ಮೋಡ ಆವರಿಸಿ, ತುಂತುರು ಮಳೆ (Rain) ಶುರುವಾಗಿತ್ತು. ಇದರಿಂದ ಭೂಮಿ ಹದವಾಗಿದೆ. ರೈತರು ಹೊಲಗಳಲ್ಲಿ ಬೇಸಾಯ ಹೂಡಿ ಬಿತ್ತನೆ ಪೂರ್ವ ಚಟುವಟಿಕೆ ಆರಂಭಿಸಿದ್ದರು. ಆದರೆ ಸೋಮವಾರ ಬೆಳಗ್ಗೆ ಹೊತ್ತಿಗೆ ಕಾರ್ಮೋಡ ಸರಿದು, ಬಿಸಿಲು ಆವರಿಸಿದೆ. ಭತ್ತ, ಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ತಲೆ ಮೇಲೆ ಕೈ ಹೊತ್ತು ಆಗಸದತ್ತ ದೃಷ್ಟಿ ನೆಟ್ಟಿದ್ದಾರೆ.
ಇದನ್ನೂ ಓದಿ – ತಾಳಗುಪ್ಪ – ಶಿವಮೊಗ್ಗ – ಮೈಸೂರು ರಾತ್ರಿ ರೈಲು ಸೇರಿ ಮೂರು ರೈಲುಗಳ ಸಮಯಲ್ಲಿ ಮಹತ್ವದ ಬದಲಾವಣೆ
ಮಳೆ ಬಿರುಸಾಗುವ ಮುನ್ಸೂಚನೆ
ರಾಜ್ಯಾದ್ಯಂತ ಮುಂಗಾರು ಬಿರುಸಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇವತ್ತಿನಿಂದ ಇನ್ನೆರಡು ದಿನ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದರಿಂದ ರೈತರಲ್ಲಿ ತುಸು ನೆಮ್ಮದಿಯ ಭಾವ ಮೂಡಿದೆ. ಆದರೆ ಮಳೆ ಸುರಿಯದೆ ಬಿತ್ತನೆ ಕಾರ್ಯ ಮತ್ತು ಇತರೆ ಕೃಷಿ ಚಟುವಟಿಕೆ ಆರಂಭವಾಗುವುದಿಲ್ಲ. ಹಾಗಾಗಿ ರೈತರು ಚಿಂತೆಗೀಡಾಗಿದ್ದಾರೆ.
ಕುಡಿಯುವ ನೀರಿನದ್ದೆ ಯೋಚನೆ
ಇನ್ನು, ಮಳೆಯಾಗದೆ ಇರುವುದರಿಂದ ಜಿಲ್ಲೆಯ ಎಲ್ಲ ಜಲಾಶಯಗಳು ಬಣಗುಡುತ್ತಿವೆ. ಜಲಾಶಯಗಳಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಜುಲೈ ಮಧ್ಯ ಭಾಗದವರೆಗೆ ಕುಡಿಯುವ ನೀರು ಪೂರೈಕೆ ಮಾಡಲು ಅವಕಾಶವಿದೆ. ಆ ಬಳಿಕ ನೀರಿಗೆ ತತ್ವರ ಎದುರಾಗಲಿದೆ. ಮಳೆಯ ನಿರೀಕ್ಷೆಯಲ್ಲಿರುವ ಅಧಿಕಾರಿಗಳು ಕುಡಿಯುವ ನೀರಿಗೆ ಸಮಸ್ಯೆ ಆಗದ ಹಾಗೆ ಸಿದ್ಧತೆಗಳನ್ನೂ ಆರಂಭಿಸಿದ್ದಾರೆ.
ಇದನ್ನೂ ಓದಿ – ಮಳೆಗಾಗಿ ಪೂಜೆ ಸಲ್ಲಿಸುತ್ತಿದ್ದಾಗಲೆ ವರುಣ ಪ್ರತ್ಯಕ್ಷ, ಶಿವಮೊಗ್ಗದಲ್ಲಿ ಕಪಿಲೇಶ್ವರನ ಪವಾಡ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200