ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತುಸು ಇಳಿಕೆಯಾಗಿದೆ. ಅಲ್ಲಲ್ಲಿ ಮಂಗಳವಾರ ಬಿಸಿಲು ಕಾಣಿಸಿಕೊಂಡು, ಜನರು ಕೊಂಚ ನಿಟ್ಟುಸಿರು ಬಿಡುವಂತಾಯಿತು. ಇನ್ನು, ಮಳೆ ಪ್ರಮಾಣ ಇಳಿಕೆಯಾದರು ಹಾನಿ ಮುಂದುವರೆದಿದೆ. (Rainfall Effect)
ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಿಸಿದೆ. ಆದರೆ ಇವತ್ತೂ ಮಳೆ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಇದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಗಿದೆ?
ತೂದೂರು ಬಳಿ ತುಂಬಿ ಹರಿದ ಕುಂಟೇಹಳ್ಳ
ತೀರ್ಥಹಳ್ಳಿ: ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡ್ಲುವಿನಲ್ಲಿ ಕುಂಟೇಹಳ್ಳ ತುಂಬಿ ಹರಿಯುತ್ತಿದೆ. ಮಂಜುನಾಥ ಶೆಟ್ಟಿ ಎಂಬುವವರ ತೋಟದ ಸುಮಾರು 30 ಅಡಿಕೆ ಮರಗಳು ಕೊಚ್ಚಿ ಹೋಗಿವೆ. ಇದರಿಂದ ಹಳ್ಳದ ಬದಿಯಲ್ಲಿರುವ ಇತರೆ ರೈತರು ಆತಂಕಕ್ಕೀಡಾಗಿದ್ದಾರೆ.
ವಿದ್ಯುತ್ ಕಂಬಗಳಿಗೆ ಹಾನಿ
ತೀರ್ಥಹಳ್ಳಿ: ತಾಲೂಕಿನ ವಿವಿಧೆಡೆ ಮರ ಬಿದ್ದು 9 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಕಟ್ಟೆಹಕ್ಕಲು ಗ್ರಾಮದಲ್ಲಿ ಮರ ಉರುಳಿ 5 ವಿದ್ಯುತ್ ಕಂಬಗಳು ಮುರಿದಿವೆ. ಮೇಗರವಳ್ಳಿ, ದೇವಂಗಿ, ಆರಗ ಗ್ರಾಮದಲ್ಲು ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಆಗುಂಬೆಯಲ್ಲಿ ರಸ್ತೆಗೆ ಬಿದ್ದ ಮರ
ತೀರ್ಥಹಳ್ಳಿ: ಆಗುಂಬೆ ಚೆಕ್‌ಪೋಸ್ಟ್ ಸಮೀಪ ಬೃಹತ್ ಮರ ಧರೆಗುರುಳಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಇದರಿಂದ ಆಗುಂಬೆ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿದ್ದಾರೆ. ಘಟನೆಯಿಂದಾಗಿ ರಸ್ತೆಯ ಎರಡು ಬದಿಯಲ್ಲಿ ಕಿಲೋ ಮೀಟರ್ ಉದ್ದಕ್ಕೆ ವಾಹನಗಳು ನಿಂತಿದ್ದವು.
ಹಾರೋಗೊಪ್ಪ ಬಳಿ ಮನೆ ಭಾಗಶಃ ಕುಸಿತ
ಶಿಕಾರಿಪುರ: ಇಲ್ಲಿನ ಹಾರೋಗೊಪ್ಪ ಸಮೀಪದ ಎಂಸಿಆರ್‌ಬಿ ಕಾಲೋನಿಯಲ್ಲಿ ಮನೆಯೊಂದು ಭಾಗಶಃ ಕುಸಿದಿದೆ. ವಿಷಯದ ತಿಳಿದು ಹಲವರು ಭೇಟಿ ನೀಡಿದ್ದರು. ಇನ್ನು, ಶಿಕಾರಿಪುರ – ಆನಂದಪುರ ರಸ್ತೆಗೆ ಮರ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರ ಬಂದ್ ಆಗಿತ್ತು.
ತ್ಯಾಗರ್ತಿ ಸಮೀಪ ಗೋಡೆ, ಮೇಲ್ಛಾವಣಿ ಕುಸಿತ
ಸಾಗರ: ತ್ಯಾಗರ್ತಿ ಸಮೀಪದ ಮಳ್ಳಾ ಗ್ರಾಮದಲ್ಲಿ ಲಲಿತಮ್ಮ ನಾಗಪ್ಪ ಎಂಬುವವರ ಮನೆ ಗೋಡೆ ಕುಸಿದಿದೆ. ರಾಮಪ್ಪ ದಿವಾನಪ್ಪ ಎಂಬುವವರ ಕೊಟ್ಟಿಗೆಯ ಮೇಲ್ಛಾವಣಿ ಕುಸಿದಿದೆ. ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಭೂಮಿ ಬಿರುಕು, ಸ್ಥಳಕ್ಕೆ ಆರಗ ಭೇಟಿ
ಹೊಸನಗರ: ಇಲ್ಲಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಗಲ್‌ನಲ್ಲಿ ಭೂಮಿ ಬಿರುಕು ಬಿಟ್ಟಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಕಳೆದ ವರ್ಷವು ಈ ಜಾಗದಲ್ಲಿ ಬಿರುಕು ಕಾಣಿಸಿತ್ತು. ಈ ಬಾರಿ ಮಳೆಗಾಲದ ಆರಂಭದಲ್ಲೇ ಬಿರುಕು ಬಂದಿದ್ದು ಆತಂಕಕಾರಿ. ಕೂಡಲೆ ತಜ್ಞರನ್ನು ಕಳುಹಿಸಿ ಸೂಕ್ತ ಅಧ್ಯಯನ ನಡೆಸಬೇಕುʼ ಎಂದರು.
ಗೌತಮಪುರದಲ್ಲಿ ಉರುಳಿದ ಮರ
ಸಾಗರ: ಭಾರಿ ಗಾಳಿ, ಮಳೆಗೆ ಗೌತಮಪುರ ಗ್ರಾಮದ ತ್ಯಾಗರ್ತಿ ಕ್ರಾಸ್‌ನಲ್ಲಿ ಮರ ಧರೆಗುರುಳಿದೆ. ಇದರಿಂದ ಎರಡು ವಿದ್ಯುತ್ ಕಂಬಗಳಿಗು ಹಾನಿಯಾಗಿದೆ. ಆನಂದಪುರ – ಶಿವಮೊಗ್ಗ ಮಾರ್ಗದಲ್ಲಿ ಹೆದ್ದಾರಿಯಲ್ಲಿ ಆಚಾಪುರದಲ್ಲಿ ಮಾವಿನ ಮರದ ರೆಂಬೆ ವಿದ್ಯುತ್ ಲೈನ್ ಮೇಲೆ ಬಿದ್ದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿಯು ವಿದ್ಯುತ್ ವ್ಯತ್ಯಯವಾಗಿದೆ.
ಜಲಾಶಯಗಳ ನೀರಿನ ಮಟ್ಟ ಹೆಚ್ಚಳ
ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಜಲಾಶಯಗಳ ಒಳ ಹರಿವು ಇಳಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಒಳ ಹರಿವು ಇವತ್ತು 26,150 ಕ್ಯೂಸೆಕ್‌ಗೆ ತಗ್ಗಿದೆ. ಭದ್ರಾ ಮತ್ತು ತುಂಗಾ ಜಲಾಶಯಗಳ ಒಳ ಹರಿವು ಪ್ರಮಾಣವು ಇಳಿಕೆಯಾಗಿದೆ.
ಇದನ್ನೂ ಓದಿ » ಆಗುಂಬೆ ಘಾಟಿ ಸಮೀಪ ಧರೆಗುರುಳಿದ ಮರ, ಕೆಲಕಾಲ ಹೆದ್ದಾರಿ ಬಂದ್

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200