ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವವು (convocation) ಮೇ 6ರಂದು ಬೆಳಗ್ಗೆ 10:30ಕ್ಕೆ ಶಂಕರಘಟ್ಟದ ಜ್ಞಾನಸಹ್ಯಾದ್ರಿ ಆವರಣದ ಬಸವ ಸಭಾಭವನದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಸಹ-ಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಉಪಸ್ಥಿತರಿರುವರು. ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಫೋರಂ (NEFT) ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುಧೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ಈ ಬಾರಿ ಎಷ್ಟು ಮಂದಿಗೆ ಪದವಿ ಪ್ರದಾನ?
ಈ ಬಾರಿ ಒಟ್ಟು 16,955 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಇದರಲ್ಲಿ 7,015 ಪುರುಷರು ಹಾಗೂ 9,940 ಮಹಿಳಾ ವಿದ್ಯಾರ್ಥಿನಿಯರು ಸೇರಿದ್ದಾರೆ. ವಿವಿಧ ವಿಷಯಗಳಲ್ಲಿ ಒಟ್ಟು 163 ಅಭ್ಯರ್ಥಿಗಳು ಪಿ.ಹೆಚ್.ಡಿ ಪದವಿ ಪಡೆಯಲಿದ್ದಾರೆ ಎಂದು ಪ್ರೊ. ಶರತ್ ಅನಂತಮೂರ್ತಿ ತಿಳಿಸಿದರು.
ಎಷ್ಟು ಮಂದಿಗೆ ಚಿನ್ನದ ಪದಕ?
ಈ ಬಾರಿ ಒಟ್ಟು 155 ಸ್ವರ್ಣ ಪದಕಗಳನ್ನು 79 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಇವರಲ್ಲಿ 68 ಮಹಿಳೆಯರು ಹಾಗೂ 11 ಪುರುಷ ವಿದ್ಯಾರ್ಥಿಗಳು ಪದಕ ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ 21 ನಗದು ಬಹುಮಾನಗಳನ್ನು ಒಟ್ಟು 29 ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಕುಲಪತಿಗಳು ಮಾಹಿತಿ ನೀಡಿದರು.

ಗೌರವ ಡಾಕ್ಟರೇಟ್ ಪದವಿಗೆ 14 ಮಂದಿಯ ಹೆಸರನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಶಿಫಾರಸು ಮಾಡಲಾಗಿದೆ. ರಾಜ್ಯಪಾಲರು ಅಂತಿಮ ಮಾಡಿದ ಬಳಿಕ ಹೆಸರು ಪ್ರಕಟಿಸಲಾಗುತ್ತದೆ.
– ಪ್ರೊ. ಶರತ್ ಅನಂತಮೂರ್ತಿ, ಕುವೆಂಪು ವಿವಿ ಕುಲಪತಿ
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಹೇಮಂತ್ ಎನ್. ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಸತ್ಯಪ್ರಕಾಶ್.ಎಂ.ಆರ್ ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಭಾರತದ ಟಾಪ್ ವಿವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಸ್ಥಾನ, ಇಲ್ಲಿದೆ ಡಿಟೇಲ್ಸ್
