SHIVAMOGGA LIVE NEWS | CHILDREN | 23 ಮೇ 2022
ಶಿವಮೊಗ್ಗದಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸರ್ಜಿ ಆಸ್ಪತ್ರೆಯಲ್ಲಿ ಇವತ್ತು ಬೆಳಗ್ಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಸದ್ಯ ನಾಲ್ಕು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಭದ್ರಾವತಿ ತಾಲೂಕು ತಡಸಾ ಗ್ರಾಮದ ಆರೀಫ್ ಅವರ ಪತ್ನಿ ಅಲ್ಮಾಜ್ ಬಾನು (22) ಅವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಆಪರೇಷನ್ ನಡೆಸಲಾಯಿತು
ಅಲ್ಮಾಜ್ ಬಾನು ಅವರು ಸರ್ಜಿ ಆಸ್ಪತ್ರೆಗೆ ದಾಖಲಾಗಿದ್ದು, ಇವತ್ತು ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು. ಅಲ್ಮಾಜ್ ಬಾನು ಅವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಾಲ್ಕು ಮಕ್ಕಳ ಪೈಕಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿವೆ.
ಉಸಿರಾಟದ ಸಮಸ್ಯೆ
ನಾಲ್ವರು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಸರ್ಜಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನಾಲ್ವರು ಮಕ್ಕಳ ಪೈಕಿ ಒಂದೊಂದು ಮಗು 1.1 ಕೆ.ಜಿ, 1.2 ಕೆ.ಜಿ, 1.3 ಕೆಜಿ, 1.8 ಕೆ.ಜಿ ಇದ್ದಾವೆ. ಆದರೆ ನಾಲ್ಕು ಮಕ್ಕಳಿಗೂ ಸ್ವಲ್ಪ ಪ್ರಮಾಣದ ಉಸಿರಾಟದ ಸಮಸ್ಯೆ ಇದೆ. ಹಾಗಾಗಿ 2 ಮಕ್ಕಳಿಗೆ ಸಿ ಪ್ಯಾಪ್ ಅಳವಡಿಸಲಾಗಿದೆ. ಇನ್ನು ಎರಡು ಮಕ್ಕಳಿಗೆ ಕೃತಕ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಜಿ ಆಸ್ಪತ್ರೆ ತಿಳಿಸಿದೆ.
ಕಾಂಗರೂ ಮದರ್ ಕೇರ್
ಎಲ್ಲಾ ಮಕ್ಕಳಿಗು ತಾಯಿ ಎದೆ ಹಾಲು ಕುಡಿಸಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ಕಾಂಗರೂ ಮದರ್ ಕೇರ್ ಮಾಡಲು ಕೂಡ ಆಸ್ಪತ್ರೆ ವ್ಯವಸ್ಥೆ ಮಾಡಿಕೊಂಡಿದೆ. ‘ಸಂಬಂಧಿಗಳಲ್ಲಿ ನಾಲ್ವರು ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. ಒಂದೊಂದು ಮಗುವಿಗೆ ಒಬ್ಬರು ಮಹಿಳೆಯನ್ನು ನಿಯೋಜನೆ ಮಾಡಲಾಗುತ್ತದೆ. ಆ ಮಗುವಿನ ಪಾಲನೆಯನ್ನು ಅವರು ಮಾಡಬೇಕು. ಇದರ ಜೊತೆಗೆ ಕಾಂಗರೂ ಮದರ್ ಕೇರ್ ಮಾಡಲಾಗುತ್ತದೆ.’ ಎಂದು ಆಸ್ಪತ್ರೆ ನಿರ್ದೇಶಕ ಡಾ.ಧನಂಜಯ ಸರ್ಜಿ ತಿಳಿಸಿದರು.
ವೈದ್ಯರಿಗೆ ಸವಾಲಾಗಿದ್ದ ಹೆರಿಗೆ
ಇಂತಹ ಹೆರಿಗೆ ಮಾಡಿಸುವುದು ವೈದ್ಯರಿಗೆ ಅತ್ಯಂತ ಸವಾಲಿನ ಕೆಲಸ. ಈ ಪ್ರಕರಣಗಳಲ್ಲಿ ಅಧಿಕ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅರವಳಿಕೆ ತಜ್ಞರನ್ನು ಇರಿಸಿಕೊಂಡು ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಇವತ್ತಿನ ಶಸ್ತ್ರಚಿಕಿತ್ಸೆ ಸಂದರ್ಭ ಅರವಳಿಕೆ ತಜ್ಞ ಡಾ. ಮೂರ್ಕಣ್ಣಪ್ಪ ಅವರು ಭಾಗವಹಿಸಿದ್ದರು.
ಐದು ಲಕ್ಷ ಜನರಲ್ಲಿ ಒಬ್ಬರು
‘ಐದು ಲಕ್ಷ ಜನರಲ್ಲಿ ಒಬ್ಬರು ಮಾತ್ರ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಾರೆ. ತಾಯಿಗೆ 32 ವಾರ 5 ದಿನಗಳಾಗಿದ್ದು, ಇದು ಅವಧಿ ಪೂರ್ವ ಹೆರಿಗೆ. ತಾಯಿಗೆ ಅರವಳಿಕೆ ಕೊಡುಬೇಕಿರುವುದು ಮತ್ತು ಅಧಿಕ ರಕ್ತಸ್ರಾವ ಉಂಟಾಗುವ ಸಂಭವವಿರುತ್ತದೆ. ಇವುಗಳ ನಮಗೆ ತುಂಬಾ ಸವಾಲಾಗಿದ್ದವು. ಎಲ್ಲ ಮಕ್ಕಳಿಗೆ ಹಾಲು ಶುರು ಮಾಡಲಾಗಿದೆ. ಅವಧಿ ಪೂರ್ವವಾಗಿದ್ದರೂ ಮಕ್ಕಳ ತೂಕ ಈ ಹಂತದಲ್ಲಿ ಸರಿಯಾಗಿದೆ. ತಾಯಿಯ ಆರೋಗ್ಯವು ಚನ್ನಾಗಿದೆ’ ಎಂದು ಸರ್ಜಿ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ. ಚೇತನಾ ತಿಳಿಸಿದ್ದಾರೆ.
ವೈದ್ಯರು ಏನಂತಾರೆ?
ನಾಲ್ಕು ಮಕ್ಕಳಿಗೆ ಜನ್ಮ ನೀಡಲಾಗಿದೆ. ಸದ್ಯ ನಾಲ್ಕು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಶಿಶುಗಳ ಮತ್ತು ಮಕ್ಕಳ ತಜ್ಞರಾದ ಡಾ. ಅನಿಲ್ ಬಿ.ಕಲ್ಲೇಶ್ ಅವರು ತಿಳಿಸಿದರು.
ನಾಲ್ಕು ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ನಾಲ್ಕು ಮಕ್ಕಳಿಗೆ ತಾಯಿಯ ಹಾಲು ಕೊಡುವುದು, ಅವುಗಳ ಆರೈಕೆ ಮಾಡುವುದು ಸುಲಭವಲ್ಲ. ತಾಯಿ ಮತ್ತು ಮಕ್ಕಳನ್ನು ಕುಟುಂಬದವರು ಸೂಕ್ಷ್ಮವಾಗಿ ಆರೈಕೆ ಮಾಡಬೇಕಾಗುತ್ತದೆ ಎಂದು ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ. ಚೇತನಾ ತಿಳಿಸಿದ್ದಾರೆ.
‘ನಾಲ್ಕು ಮಕ್ಕಳು ಇರುವ ಸಂದರ್ಭ ಶಸ್ತ್ರಚಿಕಿತ್ಸೆ ವೈದ್ಯರಿಗೆ ದೊಡ್ಡ ಸವಾಲಿನ ಕೆಲಸ. ಈಗ ಅವುಗಳನ್ನು ನೊಡಿಕೊಳ್ಳುವುದು ಕುಟುಂಬದವರಿಗೆ ಅಷ್ಟೆ ಸವಾಲಿನ ಕೆಲಸವಾಗಿದೆ. ಈ ಮಕ್ಕಳು ಮೂರು ವಾರ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಅವರಿಗೆ ಆರ್ಥಿಕವಾಗಿ ಹೊರೆ ಆಗಲಿದೆ. ಆದರೆ ಈ ನಾಲ್ವರು ಮಕ್ಕಳಿಗೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಿದ್ದೇವೆ’ ಎಂದು ಡಾ.ಧನಂಜಯ ಸರ್ಜಿ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಶಾಲೆಗಳು ಪುನಾರಂಭ, ಹೇಗಿತ್ತು ಮೊದಲ ದಿನ? ಇಲ್ಲಿದೆ 25 ಫೋಟೊಗಳು
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.