ಶಿವಮೊಗ್ಗ: ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಆಗಸ್ಟ್ 21, 22 ಮತ್ತು 23 ರಂದು ಸಮಾಧಾನ ಸಮಾರೋಹ ಎಂಬ ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್.ಎಂ.ಎಸ್. ತಿಳಿಸಿದರು.
ಶಿವಮೊಗ್ಗ ನ್ಯಾಯಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾ. ಸಂತೋಷ್.ಎಂ.ಎಸ್, ಈ ಸೌಲಭ್ಯವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ತಿಳಿಸಿದರು.

ನ್ಯಾ. ಸಂತೋಷ್ ಏನೆಲ್ಲ ಹೇಳಿದರು?
- ಶಿವಮೊಗ್ಗ ಜಿಲ್ಲೆಯಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾದ ಒಟ್ಟು 47 ಪ್ರಕರಣಗಳನ್ನು ರಾಜೀ ಸಂಧಾನಕ್ಕಾಗಿ ಗುರುತಿಸಲಾಗಿದೆ.
- ಗುರುತಿಸಲಾದ ಪ್ರಕರಣಗಳ ಪಕ್ಷಗಾರರಿಗೆ ನೋಟಿಸ್ ನೀಡಲಾಗುವುದು. ನಿಗದಿತ ದಿನಾಂಕದಂದು ನುರಿತ ಸಂಧಾನಕಾರರ ಮೂಲಕ ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥಪಡಿಸಲಾಗುವುದು.
- ರಾಜೀ ಸಂಧಾನಕ್ಕೆ ಆಸಕ್ತಿ ಇರುವವರು samadhansamaroh@gmail.com ಗೆ ಇಮೇಲ್ ಮಾಡಬಹುದು ಅಥವಾ ನೇರವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು.
ಚೆಕ್ ಬೌನ್ಸ್‌ಗೆ ವಿಶೇಷ ಅದಾಲತ್‌ಗಳು
ಜುಲೈ 11 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಯಲಿದೆ. ವೈವಾಹಿಕ ವಿವಾದ, ಚೆಕ್ ಬೌನ್ಸ್, ಅಪಘಾತ ವಿಮೆ ಹಾಗೂ ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಚೆಕ್ ಬೌನ್ಸ್ ಪ್ರಕರಣಗಳಿಗಾಗಿಯೇ ಜುಲೈ 18 ಮತ್ತು ನವೆಂಬರ್ 21 ರಂದು ವಿಶೇಷ ಲೋಕ್ ಅದಾಲತ್‌ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೇ 30 ರಂದು ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ಸಮುದಾಯದವರಿಗಾಗಿ ವಿಶೇಷ ಕಾನೂನು ಅರಿವು ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಇಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಮಳಿಗೆಗಳ ಮೂಲಕ ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನೂ ನೀಡಲಾಗುವುದು ಎಂದು ನ್ಯಾ. ಸಂತೋಷ್ ಅವರು ತಿಳಿಸಿದರು.
ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಪಕ್ಷಗಾರರಿಗೆ ಹಣದ ಉಳಿತಾಯವಾಗುವುದಲ್ಲದೆ, ಸಮಾಧಾನದ ನ್ಯಾಯ ದೊರೆಯುತ್ತದೆ. ಸಾರ್ವಜನಿಕರು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು.
– ಸಂತೋಷ್ ಎಂ.ಎಸ್., ಹಿರಿಯ ಸಿವಿಲ್ ನ್ಯಾಯಾಧೀಶರು.
ಕಳೆದ ಮಾರ್ಚ್ 14 ರಂದು ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 14,501 ಪ್ರಕರಣಗಳನ್ನು ಇತ್ಯರ್ಥಪಡಿಸಿ, 28.48 ಕೋಟಿ ರೂ.ಗಳಿಗೂ ಅಧಿಕ ಪರಿಹಾರ ವಿತರಿಸಲಾಗಿತ್ತು ಎಂದು ತಿಳಿಸಿದರು.
