ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಪ್ರಯಾಣಿಕರ ನಿರ್ಲಕ್ಷ್ಯದ ಹಿನ್ನೆಲೆ ಶಿವಮೊಗ್ಗ ವಿಭಾಗಕ್ಕೆ ಮಂಜೂರಾಗಿದ್ದ 10 ಹೈಟೆಕ್ ಬಸ್ಸುಗಳ (Electric Bus) ಪೈಕಿ 8 ಬಸ್ಸುಗಳನ್ನು ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಎರಡು ಹೈಟೆಕ್ ಬಸ್ಸುಗಳು ಮಾತ್ರ ಸದ್ಯ ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿವೆ.
ಕೆಎಸ್ಆರ್ಟಿಸಿ ವತಿಯಿಂದ ರಾಜ್ಯದ ವಿವಿಧೆಡೆ ಎಲೆಕ್ಟ್ರಿಕ್ ಬಸ್ (ಇವಿ ಬಸ್ಸುಗಳು) ಸಂಚಾರ ಆರಂಭಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಇವಿ ಬಸ್ಸುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ಶಿವಮೊಗ್ಗ ವಿಭಾಗದ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರು ಸಂಚರಿಸುವ ಮಾರ್ಗಕ್ಕೆ 8 ಇವಿ ಬಸ್ಸುಗಳನ್ನು ವರ್ಗಾಯಿಸಲಾಗಿದೆ.
10 ಬಸ್ಸುಗಳು ಮಂಜೂರಾಗಿತ್ತು
ಶಿವಮೊಗ್ಗ – ಬೆಂಗಳೂರು ಮಧ್ಯೆ ಸಂಚಾರಕ್ಕೆ ಹತ್ತು ಇವಿ ಬಸ್ಸುಗಳನ್ನು (Electric Bus) ಮಂಜೂರು ಮಾಡಲಾಗಿತ್ತು. ಮೊದಲ ಹಂತದಲ್ಲಿ ಎರಡು ಆ ನಂತರ ಹಂತ ಹಂತವಾಗಿ ಉಳಿದ ಎಂಟು ಬಸುಗಳು ಈ ಮಾರ್ಗದಲ್ಲಿ ಸಂಚಾರ ಆರಂಭಿಸಿದ್ದವು. ಸಂಪೂರ್ಣ ಹವಾನಿಯಂತ್ರಿತ, ಶಬ್ದ ರಹಿತವಾಗಿ ಸಂಚರಿಸುತ್ತಿದ್ದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಹತ್ತಬಹುದು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ನಿರೀಕ್ಷಿಸಿದ್ದರು. ಐರಾವತ ಬಸ್ಸುಗಳಷ್ಟೆ ಟಿಕೆಟ್ ದರ ನಿಗದಿ ಮಾಡಲಾಗಿತ್ತು.
ಬಸ್ ಹತ್ತಲಿಲ್ಲ ನಿರೀಕ್ಷಿತ ಸಂಖ್ಯೆಯ ಪ್ರಯಾಣಿಕರು
ಹೈಟೆಕ್ ಇವಿ ಬಸ್ಸುಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಹತ್ತಲಿಲ್ಲ. ಇದೆ ಕಾರಣಕ್ಕೆ ಟಿಕೆಟ್ ದರ ಕಡಿತಗೊಳಿಸಲಾಗಿತ್ತು. ಈ ಕುರಿತು ಕೆಎಸ್ಆರ್ಟಿಸಿ ವತಿಯಿಂದ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಆದಾಗ್ಯು ಜನರು ಇವಿ ಬಸ್ಸುಗಳತ್ತ ಒಲವು ತೋರಲಿಲ್ಲ. ಈ ಹಿನ್ನೆಲೆ ಎಂಟು ಬಸ್ಸುಗಳನ್ನು ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ಇ-ಬಸ್ ಟಿಕೆಟ್ ರೇಟ್ ಕಡಿತ, ವೀಕೆಂಡ್ಗೆ ಪ್ರತ್ಯೇಕ ದರ ಫಿಕ್ಸ್
ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಹಿನ್ನೆಲೆ ಬಸ್ಸುಗಳು ನಿಧಾನವಾಗಿ ಸಂಚರಿಸುತ್ತಿದ್ದವು. ಕೆಲವು ಸಂದರ್ಭ ಪ್ರಯಾಣದ ಅವಧಿ 8 ಗಂಟೆಯಾಗುತಿತ್ತು. ಈ ಹಿನ್ನಲೆ ಹಲವರು ಬಸ್ ಪ್ರಯಾಣಕ್ಕೆ ಹಿಂದೇಟು ಹಾಕಿದ್ದರು ಅನ್ನುತ್ತಾರೆ ಕೆಲವು ಅಧಿಕಾರಿಗಳು. ರಸ್ತೆ ಕಾಮಗಾರಿ ಪೂರ್ಣಗೊಂಡರೆ ಪ್ರಯಾಣದ ಅವಧಿ ಕಡಿತವಾಗಲಿದೆ ಎಂಬ ನಿರೀಕ್ಷೆ ಇದೆ.
ಪ್ರಯಾಣಿಕರು ಹೇಳುವುದೇನು?
ಇತ್ತ ಇವಿ ಬಸ್ಸುಗಳಲ್ಲಿ ಪ್ರಯಾಣಿಸುವವರು ಈ ಬಸ್ಸುಗಳು ಕುರಿತು ಮೆಚ್ಚುಗೆ ಮಾತನಾಡುತ್ತಾರೆ. ‘ಒಮ್ಮೆ ಆನ್ಲೈನ್ ಮೂಲಕ ಇವಿ ಬಸ್ ಟಿಕೆಟ್ ಬುಕ್ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದೆ. ಶಬ್ದವಿಲ್ಲದೆ ಬಸ್ ಸಂಚರಿಸುತ್ತದೆ. ಆದ್ದರಿಂದ ಇದು ಉಳಿದ ಬಸ್ಸುಗಳಂತಲ್ಲ. ಸಂಪೂರ್ಣ ಎಸಿ ಇದೆ. ಆರಾಮಾಗಿ ಪ್ರಯಾಣ ಮಾಡಬಹುದುʼ ಅನ್ನುತ್ತಾರೆ ಶಿವಮೊಗ್ಗದ ವಿನೋಬನಗರದ ಶಿಲ್ಪಾ.
ಇದನ್ನೂ ಓದಿ – GOOD NEWS – ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿ ಇ-ಬಸ್, ಎಲ್ಲ ಬಡಾವಣೆಗು ಕನೆಕ್ಷನ್, ಏನಿದು ಯೋಜನೆ?
ಈಗ ಎರಡು ಬಸ್ಸುಗಳಷ್ಟೆ ಇದೆ
ಸದ್ಯ ಕೆಎಸ್ಆರ್ಟಿಸಿಯ ಶಿವಮೊಗ್ಗ ವಿಭಾಗದಲ್ಲಿ ಎರಡು ಇವಿ ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಶಿವಮೊಗ್ಗದಿಂದ ಪ್ರತಿದಿನ ಬೆಳಗ್ಗೆ 11.03ಕ್ಕೆ ಮತ್ತು ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಿಂದ ತೆರಳುತ್ತವೆ. ಇನ್ನು, ಬೆಂಗಳೂರಿನಿಂದ ರಾತ್ರಿ 11 ಗಂಟೆ ಮತ್ತು ರಾತ್ರಿ 11.40ಕ್ಕೆ ಬಸ್ಸುಗಳು ಶಿವಮೊಗ್ಗಕ್ಕೆ ತೆರಳುತ್ತವೆ. ಬಸ್ ಪ್ರಯಾಣ ದರ 550 ರೂ. ನಿಗದಿಪಡಿಸಲಾಗಿದೆ.