ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಸೆಪ್ಟೆಂಬರ್ 2021
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಈ ಭಾರಿಯೂ ರದ್ದಾಗಿದೆ. ಆದರೆ ಹಿಂದೂ ಸಂಘಟನೆಗಳ ಮಹಾಮಂಡಳ ಸರ್ಕಾರ ಸೆಡ್ಡು ಹೊಡೆದು ಹತ್ತು ದಿನ ಗಣಪತಿ ಪ್ರತಿಷ್ಠಾಪಿಸಲು ನಿರ್ಧರಿಸಿವೆ.
ಗಣೇಶ ಚತುರ್ಥಿಯಂದು ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಐದು ದಿನದ ಕಾಲವಕಾಶ ನೀಡಿದೆ. ಆದರೆ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೂರ್ತಿಯನ್ನು ಸೆಪ್ಟೆಂಬರ್ 19ರವರೆಗೆ ಪೂಜಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸೆಪ್ಟೆಂಬರ್ 19ರಂದೇ ವಿಸರ್ಜನೆ ಯಾಕೆ?
ಹಿಂದೂ ಸಂಘಟನೆಗಳ ಮಹಾ ಮಂಡಳದ ವತಿಯಿಂದ ಶಿವಮೊಗ್ಗದಲ್ಲಿ 77ನೇ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇಲ್ಲಿ ಪ್ರತಿಷ್ಠಾಪಿಸುವ ಗಣಪತಿಯನ್ನು ಪ್ರತಿ ವರ್ಷ ಅನಂತ ಚತುರ್ದಶಿಯಂದು ರಾಜಬೀದಿ ಉತ್ಸವ ನಡೆಸಿ, ವಿಸರ್ಜನೆ ಮಾಡಲಾಗುತ್ತಿತ್ತು. ಸೆಪ್ಟೆಂಬರ್ 19ರಂದು ಅನಂತ ಚತುರ್ದಶಿ ಇದೆ. ಆ ದಿನ ತುಂಗಾ ನದಿಯಲ್ಲಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ನೆರವೇರಲಿದೆ ಎಂದು ಸಮಿತಿಯ ಪ್ರಮುಖರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದ್ದಾರೆ.
ವೀರ ಶಿವಮೂರ್ತಿಯ ಸ್ಮರಣೆ, ಪೂಜೆ
ಪ್ರತಿ ವರ್ಷ ಹಿಂದೂ ಮಹಾಸಭಾ ಗಣೇಶೋತ್ಸವದಲ್ಲಿ ಶಿವಮೂರ್ತಿ ಅವರನ್ನು ಸ್ಮರಣೆ ಮಾಡಿಕೊಳ್ಳಲಾಗುತ್ತದೆ. ಅವರ ಸ್ಮರಣಾರ್ಥ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. 1947ರಲ್ಲಿ ಗಣಪತಿ ಮೆರವಣಿಗೆ ವೇಳೆ ನಡೆದ ಗಲಾಟೆಯಲ್ಲಿ ನೆಹರೂ ಸ್ಟೇಡಿಯಂ ಬಳಿ ಶಿವಮೂರ್ತಿ ಅವರ ಹತ್ಯೆಯಾಗಿತ್ತು. ಅವರ ಸ್ಮರಣಾರ್ಥ ನೆಹರೂ ಸ್ಟೇಡಿಯಂ ಪಕ್ಕದ ಸರ್ಕಲ್’ಗೆ ವೀರ ಶಿವಮೂರ್ತಿ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ.
ರಾಜಬೀದಿ ಉತ್ಸವ ರದ್ದು ಇದೆ ಮೊದಲಲ್ಲ
1947ರಲ್ಲಿ ಹಿಂದು ಮಹಾಸಭಾ ಗಣಪತಿ ಮೆರವಣಿಗೆ ವೇಳೆ ಧರ್ಮಸಿಂಗ್ ಎಂಬುವವರು ಮಸೀದಿಯೊಂದರ ಮುಂದೆ ತುತ್ತೂರಿ ಊದಿದ್ದರಿಂದ ಗಲಭೆಯಾಗಿತ್ತು. ಆ ಬಳಿಕ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆ ಯಾವತ್ತೂ ಗಲಭೆಯಾದ ಉದಾಹರಣೆ ಇಲ್ಲ.
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತು ಸಾವಿರಕ್ಕೂ ಹೆಚ್ಚು ಗಣಪತಿ ವಿಸರ್ಜನೆ, ಪ್ರತಿಷ್ಠಾಪನೆ ಆಗಿದ್ದೆಷ್ಟು?
51ನೇ ವರ್ಷದ ಗಣೇಶೋತ್ಸವದ ವೇಳೆ ಕೆಲವು ಕಿಡಿಗೇಡಿಗಳಿಂದ ರಸ್ತೆಯಲ್ಲಿ ಗಲಾಟೆಯಾಯಿತು. ಇದೆ ಕಾರಣಕ್ಕೆ ಹಿಂದೂ ಮಹಾಸಭಾ ಗಣೇಶ ಮೂರ್ತಿಯ ಮೆರವಣಿಗೆಯನ್ನು ಸಮಿತಿಯೇ ರದ್ದು ಮಾಡಿತು. ಏಳು ವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ, ಅನಂತ ಚತುರ್ದಶಿಯಂದು ರಾಜಬೀದಿ ಉತ್ಸವವಿಲ್ಲದೆ ವಿಸರ್ಜನೆ ಮಾಡಲಾಯಿತು.
ಮೆರವಣಿಗೆ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಯುವಕರು ಗಣೇಶೋತ್ಸವ ಸಮಿತಿಗೆ ಸೀರೆ, ಬಳೆಯನ್ನು ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ತಿಳಿಯಾದ ಬಳಿಕ 2003ರಲ್ಲಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಪುನಾರಂಭವಾಯಿತು.
13 ದಿನ ವಿಸರ್ಜನೆ ಮುಂದಕ್ಕೆ ಹೋಗಿತ್ತು
ರದ್ದಾಗಿದ್ದ ರಾಜಬೀದಿ ತ್ಸವ ಪುನಾರಂಭಕ್ಕೆ ಸಮಿತಿ ನಿರ್ಧರಿಸಿದರೂ 2003ರಲ್ಲಿ ಜಿಲ್ಲಾಡಳಿತ ಮೆರವಣಿಗೆಗೆ ಅವಕಾಶ ನಿರಾಕರಿಸಿತು. ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಹಿಂದೂ ಸಂಘಟನೆಗಳ ಮಹಾ ಮಂಡಳ ಪಟ್ಟು ಹಿಡಿಯಿತು. ಇದೆ ಕಾರಣಕ್ಕೆ ಗಣಪತಿ ವಿಸರ್ಜನೆಯನ್ನು 13 ದಿನ ಮುಂದೂಡಲಾಯಿತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಮಧ್ಯ ಪ್ರವೇಶಿಸಿ, ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದರು. ರಾಜಬೀದಿ ಉತ್ಸವಕ್ಕೆ ಅವಕಾಶ ಕೊಡಿಸಿದ್ದರು.
ರಾಜಬೀದಿ ಉತ್ಸವಕ್ಕೆ ಅಡ್ಡಿಯಾದ ಕರೋನ
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಬೆಳಗ್ಗೆ ಕೋಟೆ ರಸ್ತೆಯಿಂದ ಹೊರಡುವ ಗಣಪತಿ ಮೂರ್ತಿ, ವಿಸರ್ಜನೆಯಾಗುವುದು ನಡುರಾತ್ರಿ. ಕರೋನದಿಂದಾಗಿ ಜನರು ಗುಂಪುಗೂಡುವಂತಿಲ್ಲ. ಹಾಗಾಗಿ ಎರಡು ವರ್ಷದಿಂದ ರಾಜಬೀದಿ ಉತ್ಸವ ರದ್ದಾಗಿದೆ. ಕಳೆದ ವರ್ಷ ಮೆರವಣಿಗೆ ಇಲ್ಲದೆ ವಿಸರ್ಜನೆ ಮಾಡಲಾಗಿತ್ತು. ಈ ಬಾರಿಯೂ ಅದು ಮುಂದುವರೆದಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422