ಶಿವಮೊಗ್ಗದ ಲೈವ್.ಕಾಂ | SHIMOGA NEWS | 26 ಜನವರಿ 2022
ಘಟನೆ 1
ಘಟನೆ ದಿನಾಂಕ : 23 ಜನವರಿ 2022
ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ದ ಸ್ವಲ್ಪ ಹೊತ್ತಿನಲ್ಲೆ ಸಿದ್ದರಾಜು (59) ಎಂಬುವವರು ಮೃತರಾಗಿದ್ದಾರೆ. ಮತ್ತೊಂದು ಬೈಕ್’ನ ಸವಾರ ಬೊನಿಫಸ್ ಜಾನ್ ಫಿರೇರಾ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ 2
ಘಟನೆ ದಿನಾಂಕ : 25 ಜನವರಿ 2022
ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿ, ಬೈಕ್ ಸವಾರರೊಬ್ಬರು ಗಾಯಗೊಂಡಿದ್ದಾರೆ. ಒಳ ಹೊಡೆತದ ಪರಿಣಾಮ ಎದ್ದು ನಿಲ್ಲುವುದಕ್ಕೂ ಸಾಧ್ಯವಾಗದೆ ಒದ್ದಾಡಿದರು. ಸ್ಥಳೀಯರ ನೆರವಿನೊಂದಿಗೆ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ತುಂಗಾ ನದಿ ಹೊಸ ಸೇತುವೆ ಮೇಲೆ ಎರಡು ದಿನದ ಅಂತರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
ಇಲ್ಲಿ ಅಪಘಾತಗಳು ಮಾಮೂಲಿ
ತುಂಗಾ ನದಿ ಹೊಸ ಸೇತುವೆ ಮೇಲೆ ಅಪಘಾತಗಳು ಮಾಮೂಲಿಯಂತಾಗಿದೆ. ದಿನ ಒಂದಿಲ್ಲೊಂದು ಅಪಘಾತ ಸಂಭವಿಸುತ್ತದೆ. ಜನರು ತಾವೂ ಗಾಯಗೊಂಡು, ವಾಹನಗಳನ್ನು ಜಖಂ ಮಾಡಿಕೊಂಡು, ಜೇಬು ಖಾಲಿ ಮಾಡಿಕೊಂಡು ಕೂರುವಂತಾಗಿದೆ. ಇಷ್ಟಾದರೂ ಅಧಿಕಾರಿಗಳು ಕ್ಯಾರೆ ಅನ್ನುವುದಿಲ್ಲ.
ಎಲ್ಲಕ್ಕೂ ಕಾರಣ ನೂರೆಂಟು ಗುಂಡಿ
ತುಂಗಾ ನದಿ ಹೊಸ ಸೇತುವೆ ಮೇಲೆ ನೂರೆಂಟು ಗುಂಡಿಗಳಿವೆ. ಅದರಲ್ಲೂ ಗಡಿ ವೀರಾಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ರಾಶಿ ರಾಶಿ ಗುಂಡಿಗಳಿವೆ. ಇವುಗಳಂತೂ ವಾಹನ ಸವಾರರ ಪಾಲಿಗೆ ಯಮನ ದರ್ಶನವನ್ನೇ ಮಾಡಿಸುತ್ತದೆ. ಈ ಗುಂಡಿಗಳು ಸೃಷ್ಟಿಯಾಗಿ ವರ್ಷ ಕಳೆಯುತ್ತ ಬಂದಿದೆ. ಆದರೆ ಕ್ಯಾರೆ ಅನ್ನುವುವವರಿಲ್ಲ.
ತೇಪೆ ಹಾಕುವ ಅಧಿಕಾರಿಗಳು
ತುಂಗಾ ನದಿ ಹೊಸ ಸೇತುವೆ ಮೇಲೆ ಬಸ್ಸು, ಲಾರಿ ಸೇರಿ ಎಲ್ಲಾ ಬಗೆಯ ವಾಹನಗಳು ಓಡಾಡುತ್ತವೆ. ಹಾಗಾಗಿ ಗುಂಡಿಗಳು ಸಹಜ ಎಂಬಂತಾಗಿದೆ. ಈ ಗುಂಡಿಗಳನ್ನು ತಪ್ಪಿಸಿಕೊಂಡು ಹೋಗುವುದೆ ವಾಹನ ಸವಾರರ ಪಾಲಿಗೆ ದೊಡ್ಡ ಸವಾಲಿನ ಕೆಲಸ. ಈ ಸಾಹಸದ ನಡುವೆಯೆ ಅಪಘಾತಗಳು ಸಂಭವಿಸುತ್ತಿವೆ.
‘ಗುಂಡಿಗಳ ಪಕ್ಕದಲ್ಲೇ ನಿಂತುಕೊಂಡು ಪೊಲೀರು ಫೈನ್ ಹಾಕ್ತಾರೆ. ಆದರೆ ಗುಂಡಿಗಳನ್ನು ಮುಚ್ಚಿಸುವ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಸರಿಯಾದ ರಸ್ತೆ ನಿರ್ಮಾಣ ಮಾಡಬೇಕು ಅನ್ನುವುದು ಯಾರಿಗೂ ಬೇಕಿಲ್ಲ. ಜನರಿಂದ ದಂಡ ವಸೂಲಿ ಮಾಡುವುದಷ್ಟೆ ನಮ್ಮ ಕೆಲಸ ಅಂದುಕೊಂಡಿದ್ದಾರೆ. ಜನರು ಸತ್ತರೂ ಸರಿ ಅಧಿಕಾರಿಗಳು, ಪೊಲೀಸರಿಗೆ ಏನೂ ಅನಿಸಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಆಟೋ ಚಾಲಕ ಸುನಿಲ್.
ಮೇಲಿನ ಎರಡು ಘಟನೆಗಳಿಗೂ ಗುಂಡಿಗಳೇ ಕಾರಣವಾಗಿವೆ ಅನ್ನವುದು ವಾಹನ ಸವಾರರ ಆಪಾದನೆ. ಇಷ್ಟಾದರೂ ಗುಂಡಿ ಮುಕ್ತ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿರುವ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತಿದೆ.
ಗುಂಡಿಗಳ ಕುರಿತು ಶಿವಮೊಗ್ಗ ಲೈವ್.ಕಾಂ 2021ರ ನವೆಂಬರ್ 14ರಂದು ವರದಿ ಮಾಡಿತ್ತು. ಆಗ ಕಣ್ಣೊರೆಸುವ ತಂತ್ರ ಎಂಬಂತೆ ಕೆಲವು ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ಈಗ ಗುಂಡಿಗಳು ಮತ್ತಷ್ಟು ಭಯಾನಕ ಸ್ವರೂಪ ಪಡೆದುಕೊಂಡಿವೆ. ಇವುಗಳನ್ನು ಮುಚ್ಚಲು ಇನೆಷ್ಟು ಮಂದಿ ಬಲಿಯಾಗಬೇಕು ಎಂದು ವಾಹನ ಸವಾರರು ಪ್ರಶ್ನಿಸುತ್ತಾರೆ.
ಇದನ್ನೂ ಓದಿ | ಶಿವಮೊಗ್ಗದ ತುಂಗಾ ನದಿ ಹೊಸ ಸೇತುವೆ ಮೇಲೆ ಬಾಯ್ತೆರೆದು ಕೂತಿದ್ದಾನೆ ಯಮ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200