ಶಿವಮೊಗ್ಗ ನಂದನ್‌ ಇನ್ನಿಲ್ಲ, ಅವರ ಬಗ್ಗೆ ಗೊತ್ತಿರಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 12 JANUARY 2025

ಶಿವಮೊಗ್ಗ : ಖ್ಯಾತ ಫೋಟೊಗ್ರಾಫರ್‌, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಛಾಯಾಗ್ರಾಹಕ (Photographer) ಶಿವಮೊಗ್ಗ ನಂದನ್‌ (57) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರೈಲ್ವೆ ನಿಲ್ದಾಣ ಸಮೀಪ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶಿವಮೊಗ್ಗ ನಂದನ್‌ ಕುರಿತು ತಿಳಿಯಬೇಕಾದ ವಿಷಯ

ಶಿವಮೊಗ್ಗ ನಂದನ್‌ ಅವರು 1967ರ ಡಿಸೆಂಬರ್‌ 2ರಂದು ಶಿವಮೊಗ್ಗ ಸಮೀಪದ ಅರಸಾಳುವಿನಲ್ಲಿ ಜನಿಸಿದರು. ತಂದೆ ಮಾದೇಗೌಡ, ತಾಯಿ ಮಾಯಮ್ಮ. ಶಿವಮೊಗ್ಗ ನಂದನ್‌ ಅವರ ಪತ್ನಿ ಶೋಭಾ. ರಂಗಭೂಮಿ ಕಲಾವಿದ ಮತ್ತು ಪತ್ರಕರ್ತ ಚಂದನ್‌ ಮತ್ತು ಕೀರ್ತನಾ ಇವರ ಮಕ್ಕಳು.

Famous Photographer Shimoga nandan

ಛಾಯಾಗ್ರಾಹಕರಾಗಿ ಪ್ರಖ್ಯಾತಿ

ನಂದನ್‌ ಅವರು 1988ರಲ್ಲಿ ಛಾಯಾಗ್ರಾಹಕರಾಗಿ ವೃತ್ತಿ ಆರಂಭಿಸಿದ್ದರು. 1994ರಲ್ಲಿ ಹೊಸ ದಿಗಂತ, ಜನವಾಹಿನಿ, ಕನ್ನಡ ಪ್ರಭ, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಗಳಿಗೆ ಛಾಯಾಗ್ರಾಹಕರಾಗಿ ವೃತ್ತಿ ನಿರ್ವಹಿಸಿದ್ದರು. ಇವರ ಫೋಟೊಗಳು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಮುಖಪುಟದಲ್ಲಿ ಭಾರತದಾದ್ಯಂತ ಪ್ರಕಟವಾದ ಇತಿಹಾಸವು ಇದೆ.

Famous Photographer Shimoga nandan

ಹಲವು ಪತ್ರಿಕೆಗಳು, ವಾರ ಪತ್ರಿಕೆಗಳಲ್ಲಿಯು ಶಿವಮೊಗ್ಗ ನಂದನ್‌ ಅವರ ಫೋಟೊಗಳಿಗೆ ಬೇಡಿಕೆ ಇದೆ. ಜಿಲ್ಲೆಯ ಹಲವು ಐತಿಹಾಸಿಕ, ಪ್ರಮುಖ ಘಟನೆಗಳ ಫೋಟೊಗಳು ಇವರ ಭಂಡಾರದಲ್ಲಿದ್ದವು.

ಫೋಟೊಗಳ ಪ್ರದರ್ಶನ

ಶಿವಮೊಗ್ಗ ನಂದನ್‌ ಕ್ಲಿಕ್ಕಿಸಿದ ಫೋಟೊಗಳು ದೇಶದ ವಿವಿಧೆಡೆ ಪ್ರದರ್ಶನವಾಗಿದೆ. ಉತ್ತರಾಖಂಡದ ನೈನಿತಾಲ್‌, ದೆಹಲಿ, ಮುಂಬೈ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯು ಫೋಟೊ ಎಗ್ಸಿಬಿಷನ್‌ ನಡೆದಿವೆ. ಶಿವಮೊಗ್ಗ ನಂದನ್‌ ಅವರ ಫೋಟೊಗಳನ್ನು ಕಂಡು ಜನರು ಬೆರಗುಗೊಳ್ಳುತ್ತಿದ್ದರು.

Famous Photographer Shimoga nandan

ಫೋಟೊಗ್ರಫಿ ಪಾಠ ಮಾಡುತ್ತಿದ್ದರು

ಫೋಟೊಗ್ರಫಿಯ ಅಗಾಧ ಜ್ಞಾನ ಹೊಂದಿದ್ದರಿಂದ ಹಲವು ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಶಿವಮೊಗ್ಗ ನಂದನ್‌ ಅವರು ಛಾಯಾಗ್ರಹಣದ ಪಾಠ ಮಾಡಿದ್ದರು. ಕುವೆಂಪು ವಿಶ್ವವಿದ್ಯಾಲಯ, ಉಜಿರೆಯ ಎಸ್‌ಡಿಎಂ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದ್ದರು. ಅಲ್ಲದೆ ಶಿವಮೊಗ್ಗದಲ್ಲಿಯೇ ಹಲವು ಫೋಟೊಗ್ರಾಫರ್‌ಗಳಿಗೆ ಶಿವಮೊಗ್ಗ ನಂದನ್‌ ಮಾರ್ಗದರ್ಶಕರಾಗಿದ್ದರು.

Famous Photographer Shimoga nandan

ಮುಲಾಜಿಲ್ಲದೆ ಉಪವಾಸ ಕೂರುತ್ತಿದ್ದರು

ಪರಿಸರ ಕುರಿತು ಕಾಳಜಿ ಹೊಂದಿದ್ದ ಶಿವಮೊಗ್ಗ ನಂದನ್‌ ನಗರದ ಯಾವುದೇ ಭಾಗದಲ್ಲಿ ಮರ ಕಡಿದರು ಏಕಾಂಗಿಯಾಗಿಯೇ ಪ್ರತಿಭಟಿಸುತ್ತಿದ್ದರು. ಶಿವಮೊಗ್ಗ ನಗರದ ವಾಸವಿ ವೃತ್ತದ ಬಳಿ ಬೃಹತ್‌ ಮರಿ ಕಡಿತಲೆ ಆರಂಭಿಸಿದಾಗ, ಸ್ಮಾರ್ಟ್‌ ಸಿಟಿ ಯೋಜನೆಗಾಗಿ ಐಬಿ ಸರ್ಕಲ್‌ ಬಳಿ ಮರ ಕಡಿಯಲು ಯತ್ನಿಸಿದಾಗ ಇಡೀ ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು.

Famous Photographer Shimoga nandan

ನವುಲೆ ಕೆರೆ ಒತ್ತುವರಿ ಮಾಡಿ ಸ್ಟೇಡಿಯಂ ನಿರ್ಮಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಚಿವರುಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೋವಿಡ್‌ ಸಂದರ್ಭ ಸವಳಂಗ ರಸ್ತೆಯ ಡಿವೈಡರ್‌ಗಳ ಮೇಲಿರುವ ಗಿಡಗಳಿಗೆ ಟ್ರಾಕ್ಟರ್‌ನಲ್ಲಿ ನೀರು ಹಾಯಿಸಿದ್ದರು. ಹೀಗೆ ಹಲವು ಪರಿಸರ ಆಸಕ್ತರೊಂದಿಗೆ ಒಡಗೂಡಿ ವಿವಿಧ ಪರಿಸರ ಕಾಳಜಿಯ ಚಟುವಟಿಕೆ ನಡೆಸಿದ್ದರು.

ಪ್ರಾಣಿ ಪ್ರೀತಿ

ಶಿವಮೊಗ್ಗ ನಂದನ್‌ ಪ್ರಾಣಿ ಪ್ರಿಯರು. ವಿವಿಧೆಡೆ ಹಾವುಗಳನ್ನು ರಕ್ಷಿಸಿದ್ದರು. ಗಾಯಗೊಂಡಿದ್ದ ಪ್ರಾಣಿ, ಪಕ್ಷಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಮನೆಯಲ್ಲಿ ಅಳಿಲು, ವಿವಿಧ ಪಕ್ಷಿಗಳನ್ನು ಸಾಕಿದ್ದರು.

Famous Photographer Shimoga nandan

ರಾಜಕೀಯಕ್ಕು ಧುಮುಕಿದ್ದರು

ಶಿವಮೊಗ್ಗ ನಂದನ್‌ ರಾಜಕೀಯಕ್ಕು ಧುಮುಕಿದ್ದರು. ಕಳೆದ ಬಾರಿ ಜಯನಗರ ವಾರ್ಡ್‌ನಿಂದ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದರು. ಜನರಿಂದಲೇ ಚಂದಾ ಸಂಗ್ರಹಿಸಿ ಮನೆ ಮನೆಗೆ ಹೋಗಿ ಪ್ರಚಾರ ನಡೆಸಿದ್ದರು. ಆದರೆ ಸೋಲನುಭವಿಸಿದ್ದರು.

Famous Photographer Shimoga nandan

ರಾಷ್ಟ್ರ, ರಾಜ್ಯ ಪ್ರಶಸ್ತಿಗಳು

ಹಲವು ಪ್ರಶಸ್ತಿಗಳು ಶಿವಮೊಗ್ಗ ನಂದನ್‌ ಅವರಿಗೆ ಸಂದಿದ್ದವು. ಕೊಲ್ಕತ್ತಾದಲ್ಲಿ ರಾಷ್ಟ್ರೀಯ ಪ್ರಶಸ್ತಿ, 5 ರಾಜ್ಯ ಪ್ರಶಸ್ತಿ, ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳು, 2010ರಲ್ಲಿ ಶಿವಮೊಗ್ಗ ದಸರಾದಲ್ಲಿ ಶಿವಮೊಗ್ಗ ನಗರಸಭೆ ವತಿಯಿಂದ ಪೌರಸನ್ಮಾನ, ಸ್ಥಳೀಯ ಸಂಘ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರ, ಸನ್ಮಾನ, ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹ ವಿಶೇಷ ಪ್ರಶಸ್ತಿ, 2022ರಲ್ಲಿ ಅರಮನೆ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಫೋಟೋ ಟುಡೆ ವಸ್ತು ಪ್ರದರ್ಶನದ ಸಮಾರಂಭದಲ್ಲಿ ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.‌

Famous Photographer Shimoga nandan

ರೈಲ್ವೆ ನಿಲ್ದಾಣದ ಸಮೀಪ ಇರುವ ಶಿವಮೊಗ್ಗ ನಂದನ್‌ ಅವರ ಮನೆಯಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ » ಖ್ಯಾತ ಛಾಯಾಗ್ರಾಹಕ ಶಿವಮೊಗ್ಗ ನಂದನ್ ವಿಧಿವಶ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment