SHIVAMOGGA LIVE | 22 JUNE 2023
SHIMOGA : ವಿದ್ಯಾನಗರದಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ (Railway Over Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ರಾಜ್ಯದ ಅತ್ಯಾಧುನಿಕ ವಾಯ್ಡೆಡ್ ಸ್ಲಾಬ್ ಇರುವ ಗಟ್ಟಿಮುಟ್ಟು ಮೇಲ್ಸೇತುವೆ ಇದಾಗಿದೆ.
ರೈಲು ಬಂದು ಹೋಗುವಾಗಲೆಲ್ಲ ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ವಾಹನ ಸವಾರರು ಬಹು ಹೊತ್ತು ಕಾಯಬೇಕಾಗುತ್ತಿದೆ. ಕಾಯುವಿಕೆಗೆ ಕೊನೆ ಹಾಡಲು ರೈಲ್ವೆ ಮೇಲ್ಸೇತುವೆ (Railway Over Bridge) ನಿರ್ಮಾಣ ಮಾಡಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೇಲ್ಸೇತುವೆಯ 8 ವಿಶೇಷತೆಗಳೇನು?
ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯು 920 ಮೀಟರ್ ಉದ್ದವಿದೆ. ವಿದ್ಯಾನಗರದ ಬಳಿ ವೃತ್ತಾಕಾರದಲ್ಲಿದ್ದು, ಬಿ.ಹೆಚ್.ರಸ್ತೆಗೆ ಸಂಪರ್ಕ ಕಲ್ಪಿಸಲಿದೆ.
ಭೂ ಸ್ವಾಧೀನ ತಕರಾರು ಇಲ್ಲದೆ ನಡೆಯುತ್ತಿರುವ ಕಾಮಗಾರಿ ಇದಾಗಿದೆ. ರೈಲ್ವೆ ಇಲಾಖೆಯ ಜಾಗದಲ್ಲಿಯೇ ಬಹುತೇಕ ಕಾಮಗಾರಿ ನಡೆಯುತ್ತಿದೆ. ವೃತ್ತಾಕಾರದ ಭಾಗವು ಬಿ.ಹೆಚ್.ರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಇಲಾಖೆ ಜಾಗದಲ್ಲಿ ನಿರ್ಮಿಸಲಾಗಿದೆ.
ಸೇತುವೆಯ ವೃತ್ತಾಕಾರದ ಭಾಗದಲ್ಲಿ ವಾಯ್ಡ್ ಸ್ಲಾಬ್ ತಂತ್ರಜ್ಞಾನ ಬಳಸಲಾಗಿದೆ. ಸೇತುವೆಯ ಸ್ಲಾಬ್ನ ಒಳಗೆ 800 ಮಿಲಿ ಮೀಟರ್ ಸುತ್ತಳತೆಯ 8 ಗಟ್ಟಿಮುಟ್ಟು ಪೈಪ್ ಅಳವಡಿಸಲಾಗಿದೆ. ಇದರಿಂದ ಕಾಂಕ್ರಿಟ್ ಕಡಿಮೆ ಬಳಕೆಯಾಗಿದ್ದು, ಸೇತುವೆಯ ಭಾರವು ಕಡಿಮೆಯಾಗಿದೆ. ಅಲ್ಲದೆ ಗಟ್ಟಿಮುಟ್ಟಾಗಿಯು ಉಳಿಯಲಿದೆ.
ಈ ಸೇತುವೆಗೆ 17 ಪಿಲ್ಲರ್ಗಳಿವೆ. ರೈಲ್ವೆ ಹಳಿಯಿಂದ ಹೊಳೆಹೊನ್ನೂರು ಭಾಗದಲ್ಲಿ ಎತ್ತರದ ಪಿಲ್ಲರ್ಗಳನ್ನು ನಿರ್ಮಿಸಲಾಗಿದೆ. ವಿದ್ಯಾನಗರದ ಕಡೆ ಕಡಿಮೆ ಎತ್ತರದ ಪಿಲ್ಲರ್ಗಳಿವೆ.
ಮೇಲ್ಸೇತುವೆಯ ಒಂದು ಭಾಗದಲ್ಲಿ ಫುಟ್ಪಾತ್ ನಿರ್ಮಿಸಲಾಗಿದೆ. ಪಾದಚಾರಿಗಳು ರಸ್ತೆಯ ಮೇಲೆ ಬಾರದಂತೆ ತಡೆಯಲು ಎತ್ತರದ ತಡೆಗೋಡೆ ನಿರ್ಮಿಸಲಾಗಿದೆ.
ಮೇಲ್ಸೇತುವೆಯು 13.5 ಮೀಟರ್ ಅಗಲವಾಗಿರಲಿದೆ. ಫುಟ್ಪಾತ್ ಹೊರತು ರಸ್ತೆಯು 9.5 ಮೀಟರ್ ಅಗಲವಾಗಲಿದೆ. ವೃತ್ತಾಕಾರದ ಭಾಗದಲ್ಲಿ ವಾಹನಗಳು ತಿರುಗಲು ಅನುಕೂಲವಾಗಲಿ ಎಂದು 11.5 ಮೀಟರ್ ಅಗಲ ಮಾಡಲಾಗಿದೆ.
ಮೇಲ್ಸೇತುವೆಯಿಂದ ಬಿ.ಹೆಚ್.ರಸ್ತೆಗೆ ವಾಹನಗಳು ಏಕಾಏಕಿ ನುಗ್ಗಲಿವೆ. ಇದನ್ನು ತಡೆಯಲು ಮತ್ತು ಬಿ.ಹೆಚ್.ರಸ್ತೆಯಲ್ಲಿ ಬರುವ ವಾಹನ ಸವಾರರಿಗೆ ಗೊಂದಲ ಆಗದಂತೆ ನೋಡಿಕೊಳ್ಳಲು ವಿಶೇಷ ವಿನ್ಯಾಸದ ವ್ಯವಸ್ಥೆ ಮಾಡಲಾಗುತ್ತಿದೆ.
ವೃತ್ತಾಕಾರದ ಸೇತುವೆ ಕೆಳಗೆ ಜಾಗ ಖಾಲಿ ಉಳಿಯಲಿದೆ. ಇಲ್ಲಿ ಪುಟ್ಟದೊಂದ ಪಾರ್ಕ್, ವಾಕಿಂಗ್ ಪಾಥ್ ಮಾದರಿ ನಿರ್ಮಿಸುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಂಸದ ರಾಘವೇಂದ್ರ ಪರಿಶೀಲನೆ
ಅತ್ಯಾಧುನಿಕ ವೃತ್ತಾಕಾರದ ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಇತ್ತೀಚೆಗೆ ಪರಿಶೀಲನೆ ನಡೆಸಿದರು. ಸೇತುವೆ ಮೇಲ್ಭಾಗದವರೆಗೆ ತೆರಳಿ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ಲಕ್ನೋದಿಂದ ಪರಿಶೀಲನೆಗೆ ಅಧಿಕಾರಿಗಳು
ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಪರಿಶೀಲನೆಗೆ ಲಕ್ನೋದಿಂದ ರೈಲ್ವೆ ಅಧಿಕಾರಿಗಳು, ತಜ್ಞರ ತಂಡ ಆಗಮಿಸಲಿದೆ. ಕಾಮಗಾರಿಯ ಪ್ರತಿ ಹಂತದಲ್ಲೂ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಗ ರೈಲ್ವೆ ಹಳಿ ಹಾದು ಹೋಗಿರುವ ಮೇಲ್ಭಾಗದಲ್ಲಿ ವಿಶೇಷ ವಿನ್ಯಾಸದ ಕಬ್ಬಿಣ್ಣದ ತಡೆಗೋಡೆ ಮಾದರಿಯನ್ನು ಅಳವಡಿಸಲಾಗುತ್ತಿದೆ. ಇದರ ಪರಿಶೀಲನೆಗೆ ಲಕ್ನೋದಿಂದ ರೈಲ್ವೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.