ಶಿವಮೊಗ್ಗ: ಅನ್ನಭಾಗ್ಯ ಯೋಜನೆಯಡಿ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಸುಲಭವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ಅನ್ನ ಸೇವೆ ಎಂಬ ನೂತನ ಮೊಬೈಲ್ ಆ್ಯಪ್ ಪರಿಚಯಿಸಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಜನತೆಯ ಸಮಯ ಹಾಗೂ ಶ್ರಮ ಉಳಿಸುವ ನಿಟ್ಟಿನಲ್ಲಿ ಡಿಜಿಟಲ್ ಸೇವೆ ಆರಂಭಿಸಲಾಗಿದೆ. ಇನ್ಮುಂದೆ ಇ-ಕೆವೈಸಿಗಾಗಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ರೇಷನ್ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರು ತಮ್ಮ ಮೊಬೈಲ್‌ನಲ್ಲಿ ಫೇಸ್ ಅಥೆಂಟಿಕೇಷನ್ ಸೌಲಭ್ಯ ಬಳಸಿ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಆಧಾರ್ ಕಾರ್ಡ್‌ನೊಂದಿಗೆ ತೆರಳಿ ಇ ಕೆವೈಸಿ ಪೂರ್ಣಗೊಳಿಸಬೇಕು. ಅಕ್ಟೋಬರ್ 20ರ ಇ ಕೆವೈಸಿ ಮಾಡಿಸಿಕೊಳ್ಳಲು ಕೊನೆಯ ದಿನಾಂಕ.

ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಈ ಸೇವೆ ಸಂಪೂರ್ಣ ಉಚಿತ. ಹಣ ವಸೂಲಿ ಮಾಡುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಪಡಿತರ ವಿತರಣೆ ಚುರುಕುಗೊಳಿಸಲು ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರಬೇಕು ಎಂದು ಸರ್ಕಾರ ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 4,96,728 ಚಾಲ್ತಿ ರೇಷನ್ ಕಾರ್ಡ್‌ಗಳಿವೆ. ಈ ಪೈಕಿ 3,40,499 ಬಿಪಿಎಲ್ ಕಾರ್ಡ್‌ಗಳು, 1,20,178 ಎಪಿಎಲ್ ಕಾರ್ಡ್‌ಗಳು ಹಾಗೂ 36,051 ಅಂತ್ಯೋದಯ ಕಾರ್ಡ್‌ಗಳಿವೆ ಎಂದು ಚಂದ್ರಭೂಪಾಲ್ ತಿಳಿಸಿದ್ದಾರೆ.