ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಆಟೋ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ತಡೆಗಟ್ಟಲು, ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪ್ಪನಾಯಕನ ಸರ್ಕಲ್‌ನಲ್ಲಿ ನೂತನ ಆಟೋ ಪ್ರೀ-ಪೇಯ್ಡ್ ಕೌಂಟರ್ ಆರಂಭಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಪ್ರಯಾಣಿಕರಿಗೆ ಪಾರದರ್ಶಕ ಹಾಗೂ ನಿಗದಿತ ದರದಲ್ಲಿ ಆಟೋ ಸೇವೆ ದೊರಕುವಂತೆ ಮಾಡುವುದು, ಆಟೋ ಪ್ರಯಾಣವನ್ನು ಮತ್ತಷ್ಟು ಸುರಕ್ಷಿತ ಹಾಗೂ ಸುಗಮಗೊಳಿಸುವುದು ಈ ಕೌಂಟರ್‌ನ ಪ್ರಮುಖ ಉದ್ದೇಶವಾಗಿದೆ. ಪೊಲೀಸ್ ಇಲಾಖೆ, ಶಿವಮೊಗ್ಗ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಸಾರಿಗೆ ಇಲಾಖೆಯ ಸಹಯೋಗದಲ್ಲಿ, ಭೀಮ ಗೋಲ್ಡ್ ಸಂಸ್ಥೆಯ ಸಹಕಾರದಿಂದ ಕೌಂಟರ್ ನಿರ್ಮಿಸಲಾಗಿದೆ ಎಂದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಆಟೋ ಪ್ರೀ-ಪೇಯ್ಡ್ ಕೌಂಟರ್‌ಗೆ ಚಾಲನೆ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ, ಡಿವೈಎಸ್ಪಿ ಸಂಜೀವ್ ಕುಮಾರ್, ಶಿವಮೊಗ್ಗ ಟ್ರಾಫಿಕ್ ಠಾಣೆ ಇನ್ಸ್‌ಪೆಕ್ಟರ್ ದೇವರಾಜ್.ಟಿ.ವಿ., ಪೂರ್ವ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಬರ್ ಮುಲ್ಲಾ, ಭಾರತಿ, ಠಾಣೆಯ ಸಿಬ್ಬಂದಿ ಹಾಗೂ ಭೀಮ ಗೋಲ್ಡ್ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಈಗಾಗಲೆ ಆಟೋ ಪ್ರೀ-ಪೇಯ್ಡ್ ಕೌಂಟರ್ ಆರಂಭಿಸಲಾಗಿತ್ತು. ಈಗ ಶಿವಪ್ಪನಾಯಕ ಸರ್ಕಲ್‌ನಲ್ಲಿ ಮತ್ತೊಂದು ಕೌಂಟರ್ ಸ್ಥಾಪಿಸಿರುವುದು ಸಾರ್ವಜನಿಕರಿಗೆ ಅನುಕೂಲ ಆಗಲಿದೆ.