ಶಿವಮೊಗ್ಗದ 50ಕ್ಕೂ ಹೆಚ್ಚು ಅಡಿಕೆ ಲಾರಿಗಳು ವಶಕ್ಕೆ, ಸಂಸದರನ್ನು ಭೇಟಿಯಾದ ನಿಯೋಗ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ಮಲೆನಾಡು ಭಾಗದಿಂದ ಉತ್ತರ ಭಾರತದ ರಾಜ್ಯಗಳಿಗೆ ಅಡಿಕೆ ಸಾಗಿಸುತ್ತಿದ್ದ ಲಾರಿಗಳನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.

➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

50ಕ್ಕೂ ಹೆಚ್ಚು ಲಾರಿಗಳು ವಶಕ್ಕೆ

ಶಿವಮೊಗ್ಗ ಜಿಲ್ಲೆ ಹಾಗೂ ಶಿರಸಿ, ಸಿದ್ಧಾಪುರ ಭಾಗದಿಂದ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ದೆಹಲಿಗೆ ಅಡಿಕೆ ಹೊತ್ತೊಯ್ಯುತ್ತಿದ್ದ ಸುಮಾರು 50 ಲಾರಿಗಳನ್ನು ಮಹಾರಾಷ್ಟ್ರದ ಬೀಡ್, ನಾಂದೇಡ್, ಔರಂಗಾಬಾದ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರಿಂದ ಕಂಗಾಲಾಗಿರುವ ಮ್ಯಾಮ್ಕೋಸ್ ಹಾಗೂ ಅಡಿಕೆ ಬೆಳೆಗಾರರ ನಿಯೋಗ ಇಂದು ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

Arecanut-growers-meet-BS-Yedyurappa-and-MP-BY-Raghavendra

ಅಡಿಕೆಯನ್ನು ಮಹಾರಾಷ್ಟ್ರದಲ್ಲಿ ಎಲ್ಲೂ ಮಾರಾಟ ಮಾಡುತ್ತಿಲ್ಲ, ಅದು ಕೇವಲ ಸಾಗಾಣಿಕೆ ಮಾರ್ಗದಲ್ಲಿದೆ. ಅಲ್ಲದೆ ಅಡಿಕೆ ನಿಷೇಧಿತ ಪದಾರ್ಥಗಳ ವರ್ಗಕ್ಕೆ ಸೇರದೆ ಇರುವುದರಿಂದ ಅಧಿಕಾರಿಗಳ ಕ್ರಮಕ್ಕೆ ಕಾನೂನು ಆಧಾರವಿಲ್ಲ ಎಂದು ನಿಯೋಗ ಸಂಸದರಿಗೆ ತಿಳಿಸಿತು.

ಸಂಸದ ರಾಘವೇಂದ್ರ ಏನಂದ್ರು?

ಬೆಳೆಗಾರರ ಮನವಿ ಆಲಿಸಿದ ಸಂಸದ ರಾಘವೇಂದ್ರ, “ಅಡಿಕೆ ಈ ಭಾಗದ ರೈತರ ಬೆನ್ನೆಲುಬಾಗಿದ್ದು, ಲಾರಿಗಳ ಜಪ್ತಿಯಿಂದ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸಾಗಾಣಿಕೆಗೆ ಅಡ್ಡಿಪಡಿಸದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಈ ಹಿಂದೆ ಸೂಚನೆ ನೀಡಿದ್ದರೂ ಇಂತಹ ಘಟನೆ ಮರುಕಳಿಸಿದೆ. ವಶಪಡಿಸಿಕೊಂಡಿರುವ ವಾಹನಗಳ ಬೇಷರತ್ತು ಬಿಡುಗಡೆಗೆ ಹಾಗೂ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಸಚಿವರು ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ಅವರೊಂದಿಗೆ ತಕ್ಷಣ ಮಾತುಕತೆ ನಡೆಸಲಾಗುತ್ತದೆ” ಎಂದರು.

ಕೇಂದ್ರ ಸಚಿವರಿಗೆ ಯಡಿಯೂರಪ್ಪ ಫೋನ್‌

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತು. ಯಡಿಯೂರಪ್ಪ ಅವರು ಸ್ಥಳದಲ್ಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಕರೆ ಮಾಡಿ ಮಾತನಾಡಿ, ರೈತರ ನೆರವಿಗೆ ಧಾವಿಸುವಂತೆ ತಿಳಿಸಿದರು. ನಿಯೋಗದಲ್ಲಿ ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಸೇರಿದಂತೆ ಪ್ರಮುಖರು ಇದ್ದರು.