ಶಿವಮೊಗ್ಗ: ಅರುಣೋದಯ ಈವೆಂಟ್ಸ್ ವತಿಯಿಂದ ಅಕ್ಟೋಬರ್ 10 ಮತ್ತು 11ರಂದು ನಗರದ ಅಲ್ಲಮಪ್ರಭು ಫ್ರೀಡಂ ಪಾರ್ಕ್‌ನಲ್ಲಿ ಶಿವಮೊಗ್ಗ ಕಾರ್ನಿವಾಲ್ ಬಿಗ್ಗೆಸ್ಟ್ ಆಟೋ ಎಕ್ಸ್‌ಪೋ ಆ್ಯಂಡ್ ಕಲ್ಚರಲ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪಾಲುದಾರ ಪೃಥ್ವಿ ಗೌಡ ತಿಳಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ 20ಕ್ಕೂ ಹೆಚ್ಚು ಕಂಪನಿಗಳ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಪ್ರದರ್ಶನ ಇರಲಿದೆ. ಇದರೊಂದಿಗೆ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಕ್ಟೋಬರ್ 10ರ ಸಂಜೆ 5.30ರಿಂದ ಪೃಥ್ವಿ ಗೌಡ ಕಲ್ಚರಲ್ ಇವೆಂಟ್ಸ್ ವತಿಯಿಂದ ‘ನಾ ಹಾಡಲು ನೀವು ಹಾಡಬೇಕು’ ಗಾಯನ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಕನ್ನಡದ ಜನಪ್ರಿಯ ಹಳೆಯ ಹಾಗೂ ಹೊಸ ಹಾಡುಗಳನ್ನು ಪ್ರಸ್ತುತಪಡಿಸಲಾಗುತ್ತದೆ ಎಂದರು.
ಅಕ್ಟೋಬರ್ 11ರ ಬೆಳಿಗ್ಗೆ 7 ಗಂಟೆಗೆ ನವರಾತ್ರಿಯ ಅಂಗವಾಗಿ ಗೋ ಗ್ರೀನ್ ವತಿಯಿಂದ ಸೀರೆ ವಾಕಥಾನ್ ಆಯೋಜಿಸಲಾಗಿದೆ. ಅಂದು ಸಂಜೆ 6ರಿಂದ ನೃತ್ಯೋತ್ಸವ ಹಾಗೂ ಗೋಲ್ಡನ್ ವಾಯ್ಸ್ ಆಫ್ ಮಲೆನಾಡು ಸೀಸನ್–2 ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗಿರಿಜಾ ಗೌಡ, ಚನ್ನೇಶ್ ಆಚಾರ್ಯ, ಅಭಿಷೇಕ್, ನಿರಂಜನಿ ರವೀಂದ್ರ, ಉಜ್ವಲ ರವಿ, ಶ್ವೇತಾ ಆಚಾರ್ಯ, ರಘು ಗುಂಡ್ಲು ಹಾಗೂ ಮುರಳಿ ಉಪಸ್ಥಿತರಿದ್ದರು.