ಜೀರೋ ಟ್ರಾಫಿಕ್‌ನಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ಬಂದ ಮಗು ಕೆಲವೇ ನಿಮಿಷದಲ್ಲಿ ಸಾವು, ಆಗಿದ್ದೇನು?

ಶಿವಮೊಗ್ಗ: ಜ್ವರ ಹಾಗೂ ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಮೂರೂವರೆ ತಿಂಗಳ ಕಂದಮ್ಮನನ್ನು ಜೀರೋ ಟ್ರಾಫಿಕ್‌ನಲ್ಲಿ ಆಸ್ಪತ್ರೆಗೆ ಕರೆತರಲಾಗಿದೆಯಾದರೂ, ಚಿಕಿತ್ಸೆ ಆರಂಭವಾಗುವಷ್ಟರಲ್ಲಿ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕೊಪ್ಪಳ ಜಿಲ್ಲೆಯ ಯಲಬುರಗಿಯ ಪವಿತ್ರಾ ಮತ್ತು ಹನುಮೇಶ್‌ ದಂಪತಿಯ ಮೊದಲ ಮಗು ಅನ್ವಿಕಾ ಮೃತಪಟ್ಟ ಕಂದಮ್ಮ. ಕೆಲ ದಿನಗಳಿಂದ ಅನ್ವಿಕಾ ಜ್ವರ ಮತ್ತು ಕಫದಿಂದ ಬಳಲುತ್ತಿದ್ದಳು. ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಮಾರ್ಗಮಧ್ಯೆ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದರಿಂದ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆತರಲು ತೀರ್ಮಾನಿಸಲಾಯಿತು.

Zero-Traffic-for-3-month-Baby-in-Shimoga-

ಮಾರ್ಗ ಮಧ್ಯೆ ಆಂಬುಲೆನ್ಸ್‌ ಪಂಕ್ಚರ್

ಮಗುವಿನ ತುರ್ತು ಚಿಕಿತ್ಸೆಗಾಗಿ ದಾವಣಗೆರೆ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲಾ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದ್ದರು. ಹೊನ್ನಾಳಿಯಿಂದ ಶಿವಮೊಗ್ಗದವರೆಗೆ ಸಂಚಾರ ಪೊಲೀಸರು ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಆದರೆ ದಾವಣಗೆರೆಯಿಂದ ಹೊರಟ ಆಂಬುಲೆನ್ಸ್‌ ಚಕ್ರಕ್ಕೆ ಹೊನ್ನಾಳಿ ಬಳಿ ಸ್ಕ್ರೂ ಸಿಲುಕಿ ಪಂಕ್ಚರ್ ಆಗಿತ್ತು. ಚಕ್ರ ಬದಲಿಸಲು ಸುಮಾರು 20 ನಿಮಿಷ ತಡವಾಗಿದ್ದರಿಂದ ಮಗುವಿನ ಉಸಿರಾಟದ ಸಮಸ್ಯೆ ಮತ್ತಷ್ಟು ಗಂಭೀರವಾಯಿತು.‌

ಪೋಷಕರ ಆಕ್ರಂದನ, ಕಣ್ಣೀರಾದ ಜನ

ಮಗುವಿನ ಆಗಮನದ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಆಸ್ಪತ್ರೆಗೆ ತಲುಪಿ ಚಿಕಿತ್ಸೆ ಆರಂಭವಾಗುವಷ್ಟರಲ್ಲಿ ಅನ್ವಿಕಾ ಕೊನೆಯುಸಿರೆಳೆದಿದ್ದಳು. ಮಗುವನ್ನು ಉಳಿಸಲು ಪೊಲೀಸರು ಮತ್ತು ಸಾರ್ವಜನಿಕರು ಹರಸಾಹಸ ಪಟ್ಟಿದ್ದರೂ ವಿಧಿ ಕರುಣೆ ತೋರಲಿಲ್ಲ. ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಸಾರ್ವಜನಿಕರು, ಪೊಲೀಸರು ಕಣ್ಣೀರಾದರು. ರಾತ್ರಿಯೇ ಪೋಷಕರು ಮಗುವಿನ ಮೃತದೇಹವನ್ನು ತಮ್ಮೂರಿಗೆ ಕೊಂಡೊಯ್ದಿದ್ದಾರೆ.

ಇಲ್ಲಿದೆ ಜೀರೋ ಟ್ರಾಫಿಕ್‌ನ ವಿಡಿಯೋ