SHIVAMOGGA LIVE NEWS | 17 MARCH 2023
SHIMOGA : ಲೇಡಿಸ್ ನೈಟ್ ಪಾರ್ಟಿ (Night party) ನಡೆಯುತ್ತಿದ್ದ ಹೊಟೇಲ್ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪಾರ್ಟಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿ, ಮಹಿಳೆಯರನ್ನ ಹೊಟೇಲ್ ನಿಂದ ಹೊರಗೆ ಕಳುಹಿಸಿದ್ದಾರೆ.
ಕುವೆಂಪು ರಸ್ತೆಯ ಹೊಟೇಲ್ ಒಂದರಲ್ಲಿ ಲೇಡಿಸ್ ಪಾರ್ಟಿ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಕುರಿತು ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರ ಜೊತೆಗೆ ಹೊಟೇಲ್ ಗೆ ಆಗಮಿಸಿದ ಬಜರಂಗದಳ ಕಾರ್ಯಕರ್ತರು ಪಾರ್ಟಿ (Night party) ನಿಲ್ಲಿಸುವಂತೆ ಹೊಟೇಲ್ ಸಿಬ್ಬಂದಿಗೆ ಸೂಚಿಸಿದ್ದಾರೆ.
‘ಆ ಸಂಸ್ಕೃತಿ ಶಿವಮೊಗ್ಗಕ್ಕೆ ಬೇಡ’
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ‘ಲೇಟ್ ನೈಟ್ ಲೇಡಿಸ್ ಪಾರ್ಟಿ ನಡೆಯುತ್ತಿತ್ತು. ಒಂದು ವಾರದ ಮೊದಲೆ ಪಾರ್ಟಿ ಕುರಿತು ಪೊಲೀಸರ ಗಮನಕ್ಕೆ ತಂದಿದ್ದೆವು. ಮಲೆನಾಡು ಭಾಗದಲ್ಲಿ ಇಂತಹ ಪಾರ್ಟಿಗಳನ್ನು ನಡೆಸಬಾರದು ಎಂದು ತಿಳಿಸಿದ್ದೆವು. ಆದರೆ ಅದನ್ನು ಮೀರಿ ಪಾರ್ಟಿ ಮಾಡಿದ್ದಾರೆ. ಆದ್ದರಿಂದ ನಾವು ಪೊಲೀಸ್ ಇಲಾಖೆ ಗಮನಕ್ಕೆ ತಂದು, ಪೊಲೀಸರೊಂದಿಗೆ ಇಲ್ಲಿಗೆ ಬಂದಿದ್ದೇವೆ. ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವ ಪಾರ್ಟಿಯನ್ನು ಬಜರಂಗದಳದ ವತಿಯಿಂದ ನಿಲ್ಲಿಸಿದ್ದೇವೆ’ ಎಂದು ತಿಳಿಸಿದರು.
ದಾಳಿ ನಡೆಸಿ ಮಹಿಳೆಯರನ್ನು ಹೊಟೇಲ್ ನಿಂದ ಹೊರಗೆ ಕಳುಹಿಸಲಾಯಿತು. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.