SHIVAMOGGA LIVE NEWS | 14 JANUARY 2023
SHIMOGA : ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿ ಉದ್ಯಮಿ ಶರತ್ ಭೂಪಾಳಂ ಸಾವನ್ನಪ್ಪಿದ್ದರು. ಅಗ್ನಿ ಶಾಮಕ (fire department) ಸಿಬ್ಬಂದಿಯ ವಿಳಂಬ ಧೋರಣೆಯೆ ಉದ್ಯಮಿ ಸಾವಿಗೆ ಕಾರಣ. ಆದ್ದರಿಂದ ಅಗ್ನಿಶಾಮಕ ದಳಕ್ಕೆ ಸರಿಯಾದ ತರಬೇತಿ, ಸಮರ್ಪಕ ಉಪಕರಣ ಒದಗಿಸಬೇಕು ಎಂದು ಆಗ್ರಹಿಸಿ ಮೌನ ಮೆರವಣಿಗೆ ನಡೆಸಲು ಭೂಪಾಳಂ ಕುಟುಂಬದವರು ಮತ್ತು ಅವರ ಸ್ನೇಹಿತರು ನಿರ್ಧರಿಸಿದ್ದಾರೆ.
ಉದ್ಯಮಿ ಶರತ್ ಭೂಪಾಳಂ ಅವರ ತಂದೆ ಉದ್ಯಮಿ ಶಶಿಧರ್ ಭೂಪಾಳಂ ಅವರು ಸುದ್ದಿಗೋಷ್ಠಿ ನಡೆಸಿ, ಅಗ್ನಿಶಾಮಕ ಸಿಬ್ಬಂದಿಯ (fire department) ವಿಳಂಬ ನೀತಿಯಿಂದಾಗಿ ತಮ್ಮ ಮಗ ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿ ಮತ್ಯಾರಿಗು ಬರಬಾರದು. ಇದೆ ಕಾರಣಕ್ಕೆ ಜ.16ರಂದು ತಮ್ಮ ಮನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಲೈವ್.ಕಾಂ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಅಗ್ನಿ ಅವಘಡಕ್ಕೆ ಕಾರಣವೇನು?
ಭೂಪಾಳಂ ನಿವಾಸದ ಮೊದಲ ಮಹಡಿಯಲ್ಲಿ ಮಗ ಶರತ್ ಭೂಪಾಳಂ ಮತ್ತು ಮೊಮ್ಮಕ್ಕಳು ಇದ್ದರು. ಕೆಳ ಭಾಗದಲ್ಲಿ ನಾವು ಇದ್ದೆವು. ನಮ್ಮ ಕೊಠಡಿಯಲ್ಲಿದ್ದ ಎಸಿ ಸ್ಟೇಬಲೈಸರ್ ಶಾರ್ಟ್ ಸರ್ಕಿಟ್ ಸಂಭವಿಸಿದೆ. ವಾಕ್ ಇನ್ ವಾರ್ಡ್ ರೋಬ್ ನಲ್ಲಿ ಸ್ಟೇಬಲೈಸರ್ ಇತ್ತು. ಹಾಗಾಗಿ ಅದು ಸುಟ್ಟು ಮನೆಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಬೆಳಗಿನ ಜಾವ 4 ಗಂಟೆಗೆ ಘಟನೆ ಸಂಭವಿಸಿತ್ತು ಎಂದು ಉದ್ಯಮಿ ಶರತ್ ಭೂಪಾಳಂ ಅವರ ತಂದೆ ಶಶಿಧರ್ ಭೂಪಾಳಂ ಮಾಧ್ಯಮಗಳಿಗೆ ತಿಳಿಸಿದರು.
ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು ಶರತ್
ಘಟನೆ ಸಂಭವಿಸುತ್ತಿದ್ದಂತೆ ಉದ್ಯಮಿ ಶರತ್ ಭೂಪಾಳಂ ಅವರೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಅಗ್ನಿಶಾಮಕ ದಳದ ಕಚೇರಿ ನಮ್ಮ ಮನೆಗೆ ಮೂರ್ನಾಲ್ಕು ನಿಮಿಷಕ್ಕೆ ತಲುಪಬಹುದಾದ ಹಾದಿ. ಆದರೆ ಕರೆ ಮಾಡಿ 15 ನಿಮಿಷದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದರು. ಅಷ್ಟು ಹೊತ್ತಿಗಾಲೆ ಮೊದಲ ಮಹಡಿಯ ಕೊಠಡಿಯಲ್ಲಿದ್ದ ತನ್ನ ಮಗನನ್ನು ಹೊರಗೆ ಕರೆತರಲು ಶರತ್ ಭೂಪಾಳಂ ಒಳಗೆ ಹೋಗಿದ್ದರು. ಎಷ್ಟೆ ಹೊತ್ತಾದರು ಅವರು ಹೊರಗೆ ಬರಲಿಲ್ಲ ಎಂದು ಶಶಿಧರ್ ಭೂಪಾಳಂ ಬೇಸರ ವ್ಯಕ್ತಪಡಿಸಿದರು.
ಅವರೂ ಒಳ ಹೋಗಲಿಲ್ಲ, ನಮಗೂ ಬಿಡಲಿಲ್ಲ
ಪ್ರತಿ ಅಗ್ನಿಶಾಮಕ ವಾಹನದಲ್ಲಿ ಆಕ್ಸಿಜನ್ ಮಾಸ್ಕ್ ಸಹಿತ ಮೂರು ಆಕ್ಸಿಜನ್ ಸಿಲಿಂಡರ್, ಟಾರ್ಚ್ ಇರುವ ಟೋಪಿಗಳು, ಫೈರ್ ರೆಸಿಸ್ಟೆಂಟ್ ಸೂಟ್ ಇರಬೇಕು. ನಮ್ಮ ಮನೆ ಬಳಿ ಬಂದ ಮೊದಲ ಅಗ್ನಿಶಾಮಕ ವಾಹನದಲ್ಲಿ ಈ ಮೂರು ಇರಲಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಪೈಕಿ ಒಂದು ತಂಡ, ಒಳಗೆ ಹೋಗಿ ಸರ್ವೆ ಮಾಡಬೇಕು ಎಂಬ ನಿಯಮವಿದೆ. ಆದರೆ ಅದ್ಯಾವುದು ಆಗಲಿಲ್ಲ. ಒಳಗೆ ಸಿಕ್ಕಿಬಿದ್ದಿದ್ದ ಶರತ್ ಭೂಪಾಳಂ ಅವರನ್ನು ಕರೆತರುವ ಪ್ರಯತ್ನವಾಗಲಿಲ್ಲ. ನಾವು ಹೋಗುತ್ತೇವೆ ಅಂದರೆ ನಮ್ಮನ್ನೂ ಬಿಡಲಿಲ್ಲ. ಎಲ್ಲರು ಪಟ್ಟು ಹಿಡಿದಾಗ ಸಿಬ್ಬಂದಿ ಆಕ್ಸಿಜನ್ ಮಾಸ್ಕ್ ಧರಿಸಿ ಒಳಗೆ ಹೋಗಲು ಯತ್ನಿಸಿದರು. ಆದರೆ ಆಕ್ಸಿಜನ್ ಇಲ್ಲ ಎಂದು ನಿಂತುಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿರು.
ಎರಡನೆ ವಾಹನದಲ್ಲಿ ಎಲ್ಲವು ಇತ್ತು
ಆಘಾತಕ್ಕೊಳಗಾಗಿ ನಮ್ಮ ಕುಟುಂಬದ ಸ್ನೇಹಿತರಾದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರಿಗೆ ಕರೆ ಮಾಡಿದೆವು. ಘಟನೆ ಸಂಭವಿಸಿ ಅರ್ಧ ಗಂಟೆ ಬಳಿಕ ಅಗ್ನಿಶಾಮಕ ದಳದ ಎರಡನೆ ವಾಹನ ಬಂತು. ಅದರಲ್ಲಿ ಎಲ್ಲ ಉಪಕರಣಗಳಿದ್ದವು. ಶರತ್ ಭೂಪಾಳಂ ಅವರನ್ನು ಹೊರಗೆ ಕರೆತಂದು ನಂಜಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಾರ್ಬನ್ ಮೋನಾಕ್ಸೈಡ್ ಸೇವನೆಯಿಂದ ತಮ್ಮ ಮಗ ಸಾವನ್ನಪ್ಪಿದರು. ಅಗ್ನಿಶಾಮಕ ಸಿಬ್ಬಂದಿಯ ವಿಳಂಬ ಧೋರಣೆಯಿಂದ ಉದ್ಯಮಿಯನ್ನು ಕಳೆದುಕೊಂಡೆವು ಎಂದು ಶಶಿಧರ್ ಭೂಪಾಳಂ ಆರೋಪಿಸಿದರು.
ನೀರು ಬಿಡಲು ಪೈಪ್ ಸಾಲಲಿಲ್ಲ
ಮೊದಲ ವಾಹನದಲ್ಲಿ ಉಪಕರಣಗಳು ಇರಲಿಲ್ಲ. ಅವರು ನಮ್ಮ ಮನೆಯ ಕಾಂಪೌಂಡ್ ಒಳಗೆ ವಾಹನ ತರಲಿಲ್ಲ. ನೀರು ಬಿಡಲು ಪೈಪ್ ಸಾಲಲಿಲ್ಲ. ಎರಡನೆ ವಾಹನದಲ್ಲಿ ಉಪಕರಣಗಳಿದ್ದವು. ಆದರೆ ತಮ್ಮ ಬೆಡ್ ರೂಮಿನಲ್ಲಿ ಬೆಂಕಿಯ ಮೂಲದವರೆಗೆ ತಲುಪುವಷ್ಟು ಪೈಪ್ ಇರಲಿಲ್ಲ. ಮೂರನೆ ವಾಹನದಲ್ಲಿ ಪೈಪ್ ತರಿಸಿ, ಜೋಡಿಸಿ ನೀರು ಬಿಡಲಾಯಿತು. ಎರಡನೆ ವಾಹನದಲ್ಲಿ ಬ್ಯಾಟರಿ ಚಾಲಿತ ಫ್ಯಾನ್ ಇತ್ತು. ಅದನ್ನು ಬಳಸಿದಾಗ ಮನೆಯೊಳಗಿದ್ದ ಹೊಗೆ ಹೋಯಿತು. ಮೊದಲ ವಾಹನದಲ್ಲಿಯೆ ಇವೆಲ್ಲವು ಇದ್ದಿದ್ದರೆ ಅನಾಹುತ ತಪ್ಪುತ್ತಿತ್ತು ಎಂದರು.
ಅಗ್ನಿಶಾಮಕ ದಳದ ಸೇವೆ ಉಚಿತ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲು ಮಾಡಲು ಸಾದ್ಯವಿಲ್ಲ. ಆದರೆ ಹೈಕೋರ್ಟ್ ನಲ್ಲಿ ದಾವೆ ಹೂಡಬಹುದು ಎಂದು ವಕೀಲರು ತಿಳಿಸಿದ್ದು, ಆ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ತಿಳಿಸಿದರು.
ಮೌನ ಮೆರವಣಿಗೆಗೆ ಕಾರಣವೇನು?
ಅಗ್ನಿಶಾಮಕ ದಳವನ್ನು ಸದಾಕಾಲ ಸನ್ನದ್ಧವಾಗಿ, ಉಪಕರಣಗಳು ಬಳಕೆಗೆ ಯೋಗ್ಯವಾಗಿದ್ದರೆ ಹಲವರ ಪ್ರಾಣ ರಕ್ಷಣೆ ಮಾಡಬಹುದು. ಶರತ್ ಭೂಪಾಳಂ ಅವರನ್ನು ಕಳೆದುಕೊಂಡ ಹಾಗೆ ಮತ್ಯಾರದ್ದೂ ಪ್ರಾಣ ಹೋಗಬಾರದು ಎಂದು ಮೌನ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಜ.16ರಂದು ಬೆಳಗ್ಗೆ ಭೂಪಾಳಂ ನಿವಾಸದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಅಗ್ನಿಶಾಮಕ ದಳಕ್ಕೆ ಉಪಕರಣಗಳು, ಸೂಕ್ತ ತರಬೇತಿ ನೀಡಬೇಕು ಎಂದು ಮನವಿ ಮಾಡುವುದು ಇದರ ಉದ್ದೇಶ ಎಂದು ಶಶಿಧರ್ ಭೂಪಾಳಂ ತಿಳಿಸಿದರು.
ಇದನ್ನೂ ಓದಿ – ಉದ್ಯಮಿ ಮನೆಯಲ್ಲಿ ಅಗ್ನಿ ಅವಘಡ, ಡಿಸಿಗೆ ಪಾಲಿಕೆ ವಿರೋಧ ಪಕ್ಷಗಳ ಸದಸ್ಯರ ಮನವಿ, ಕಾರಣವೇನು?
ಉದ್ಯಮಿ ಶರತ್ ಭೂಪಾಳಂ ಸ್ನೇಹಿತರಾದ ಶ್ರೀರಾಮ್, ಶಬರಿ, ಶಿಲ್ಪಾ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ – ಕೊನೆವರೆಗು ಹೋರಾಡಿದ ಉದ್ಯಮಿ ಶರತ್ ಭೂಪಾಳಂ, ಭಾನುವಾರ ಬೆಳಗಿನ ಜಾವ ಏನೇನಾಯ್ತು?