ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಗಾಡಿಕೊಪ್ಪದಲ್ಲಿ ಜ.2ರಂದು ಸಂಭವಿಸಿದ ಅಪಘಾತದ ಸಿಸಿಟಿವಿ ದೃಶ್ಯ ಈಗ ವೈರಲ್ ಆಗಿದೆ. ಘಟನೆಯಲ್ಲಿ ಶಾಲೆ ವಿದ್ಯಾರ್ಥಿನಿ ಮತ್ತು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗಲೆ ಎಚ್ಚೆತ್ತುಕೊಳ್ಳದೆ ಇದ್ದರೆ ಇಲ್ಲಿ ಇನ್ನಷ್ಟು ಅಪಘಾತ ಸಂಭವಿಸುವ ಸಾಧ್ಯತೆ ಇದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹೇಗಾಯ್ತು ಅಪಘಾತ?
ಆಯನೂರು ಕಡೆಯಿಂದ ವೇಗವಾಗಿ ಬಂದ ಅಪಾಚೆ ಬೈಕ್, ಮೊದಲು 12 ವರ್ಷದ ಬಾಲಕಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ರಸ್ತೆಯ ಎಡ ಭಾಗದಲ್ಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಶಿವರಾಜ್ (45) ಎಂಬುವವರಿಗೆ ಡಿಕ್ಕಿಯಾಗಿದೆ. ಪಕ್ಕದಲ್ಲಿ ನಿಂತಿದ್ದ ಎರಡು ಬೈಕುಗಳಿಗು ಅಪ್ಪಳಿಸಿತು. ಇಷ್ಟಾದರು ಬೈಕ್ ವೇಗ ತಗ್ಗಲಿಲ್ಲ. ಫುಟ್ ಪಾತ್ ಮೇಲೆ ಹಾರಿದ ಬೈಕ್ ಅಂಗಡಿಯೊಂದರ ಪಕ್ಕದಲ್ಲಿದ್ದ ಕಟ್ಟೆಗೆ ಗುದ್ದಿದೆ. ಅಪಘಾತದ ರಭಸಕ್ಕೆ ಕಾಂಕ್ರಿಟ್ ಕಟ್ಟೆ ಒಡೆದು ಹೋಗಿದೆ.
ಸದ್ಯ ಗಂಭೀರ ಗಾಯಗೊಂಡಿರುವ ಬಾಲಕಿ ಮತ್ತು ಶಿವರಾಜ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ಬಳಿಕ ಸ್ಥಳೀಯರು ತೀವ್ರ ಆಕ್ರೋಸ ವ್ಯಕ್ತಪಡಿಸಿದ್ದರಿಂದ ಗಾಡಿಕೊಪ್ಪದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಎರಡು ದಿನ ಗಾಡಿಕೊಪ್ಪ ಸರ್ಕಲ್‌ನಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಜನ ಸಂದಣಿ ಹೆಚ್ಚಿರುವ ಪ್ರದೇಶ
ಗಾಡಿಕೊಪ್ಪದ ಎರಡು ಬದಿಯಲ್ಲು ವಿವಿಧ ಅಂಗಡಿಗಳು, ಹೊಟೇಲ್, ಕಚೇರಿಗಳಿವೆ. ಆದ್ದರಿಂದ ಸದಾ ಜನ ಸಂಚಾರ ಇರುತ್ತದೆ. ರಸ್ತೆಗೆ ಹೊಂದಿಕೊಂಡು ಸರ್ಕಾರಿ ಶಾಲೆ ಇದೆ. ಅಂಗನವಾಡಿಯಿಂದ ಎಸ್ಸೆಸ್ಸೆಲ್ಸಿವರೆಗೆ ತರಗತಿಗಳು ನಡೆಯುತ್ತವೆ. ಸುತ್ತಮುತ್ತಲಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ.
ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಅಪಘಾತ
‘ಆಲ್ಕೊಳ ಸರ್ಕಲ್‌ನಿಂದ ಗಾಡಿಕೊಪ್ಪ ಕಡೆಗೆ ತೆರಳುವ ವಾಹನಗಳು ವೇಗ ಕಡಿಮೆ ಇರುತ್ತದೆ. ಆದರೆ ಸಾಗರ ಕಡೆಯಿಂದ ಬರುವ ಬಹುತೇಕ ವಾಹನಗಳು ಅತಿ ವೇಗದಲ್ಲಿರುತ್ತವೆ. ಆಯನೂರಿನಿಂದ ಇಲ್ಲಿಯ ತನಕ ಎಲ್ಲಿಯು ಇಷ್ಟು ಜನ ಸಂದಣಿ ಇಲ್ಲ. ಹಾಗಾಗಿ ವಾಹನ ಚಾಲಕರು ಅತಿ ವೇಗವಾಗಿಯೇ ಗಾಡಿಕೊಪ್ಪಕ್ಕೆ ಬರುತ್ತಾರೆ. ಇದೇ ಕಾರಣಕ್ಕೆ ಅಪಘಾತಗಳು ಹೆಚ್ಚಾಗುತ್ತಿವೆ. ರಸ್ತೆ ಪಕ್ಕದ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡಲು ನಮಗೆ ಆತಂಕವಾಗುತ್ತಿದೆ ಅನ್ನುತ್ತಾರೆ ಅಕ್ಕಿ ವ್ಯಾಪಾರಿ ಲಕ್ಷ್ಮಣ.
‘ಇಲ್ಲಿ ಹಂಪ್ ಹಾಕಿ ಎಂದು ಹಲವು ವರ್ಷದಿಂದ ಬೇಡಿಕೆ ಇಟ್ಟಿದ್ದೇವೆ. ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಮನವಿ ಸಲ್ಲಿಸಿದ್ದೆವು. ಆದರೆ ಹೆದ್ದಾರಿ ಆಗಿರುವುದರಿಂದ ಹಂಪ್ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಈ ಹಿಂದೆ ಇಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿದ್ದರು. ಪ್ರಧಾನಿ ಮೋದಿ ಕಾರ್ಯಕ್ರಮ ಇದೆ ಎಂದು ಬ್ಯಾರಿಕೇಡ್‌ಗಳನ್ನು ಕೊಂಡೊಯ್ದಿದ್ದರು. ಈಗ ಅಪಘಾತದ ಬಳಿಕ ಬ್ಯಾರಿಕೇಡ್ ತಂದಿಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ದತ್ತಾತ್ರಿ.
ಗಾಡಿಕೊಪ್ಪದಲ್ಲಿ ಶಾಲೆ ಅವಧಿಗೆ ಸರಿಯಾಗಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಸಂಚಾರ ಪೊಲೀಸರನ್ನು ನಿಯೋಜನೆ ಮಾಡಬೇಕು, ವಾಹನಗಳ ವೇಗ ಸಂಪೂರ್ಣ ತಗ್ಗುವಂತೆ ಬ್ಯಾರಿಕೇಡ್ ಹಾಕಬೇಕು, ಬ್ಯಾರಿಕೇಡ್‌ಗಳನ್ನು ಶಾಶ್ವತವಾಗಿ ಇಲ್ಲಿ ಉಳಿಸಬೇಕು, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವವರಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ. ಸದ್ಯ ಗಾಡಿಕೊಪ್ಪ ಸರ್ಕಲ್‌ನಲ್ಲಿ ಜನರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ರಸ್ತೆಗಿಳಿಯುವಂತಾಗಿದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ವಾಹನಗಳ ವೇಗ ತಗ್ಗಿಸಲು ಕ್ರಮ ವಹಿಸಿದರೆ ಜನರು ನೆಮ್ಮದಿಯಿಂದ ಓಡಾಡುವಂತಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗದ ರಸ್ತೆಯಲ್ಲಿ ವೀಲಿಂಗ್, ಮತ್ತೊಂದು ವಿಡಿಯೋ ವೈರಲ್