ಶಿವಮೊಗ್ಗ: ಬಿಎಸ್ಸಿ ಟೆಕ್ಸ್ಟೈಲ್ಸ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಬಿ.ಹೆಚ್.ರಸ್ತೆಯಲ್ಲಿ ಸಚಿವರ ಕಾರನ್ನು ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕೇಂದ್ರ ಸಚಿವ ಸೋಮಣ್ಣ ಅವರ ಕಾರು ಆಶೋಕ ವೃತ್ತದಿಂದ ಬಿ.ಹೆಚ್.ರಸ್ತೆಗೆ ಅಗಮಿಸುತ್ತಿದ್ದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಮುತ್ತಿಗೆ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿದರು. ಅನಿರೀಕ್ಷಿತ ಪ್ರತಿಭಟನೆ ಆಗಿದ್ದರಿಂದ ಬೆರಳೆಣಿಗೆಯಷ್ಟು ಪೊಲೀಸರು ಮಾತ್ರ ಅಲ್ಲಿದ್ದರು. ಆ ಸಿಬ್ಬಂದಿಯೇ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಿ ಸಚಿವರ ಕಾರು ಮುಂದೆ ಸಾಗಲು ಅನುವು ಮಾಡಿಕೊಟ್ಟರು.

ಕಪ್ಪು ಬಾವುಟ ಪ್ರದರ್ಶನಕ್ಕೆ ಕಾರಣವೇನು?
ಎಸ್ಐಆರ್ನಲ್ಲಿ ಆಗಿರುವ ಅಕ್ರಮ ಮತ್ತು ಮತಗಳ್ಳತನ ವಿರೋಧಿಸಿ ಕೇಂದ್ರ ಸಚಿವ ವಿ.ಸೋಮಣ್ಣಗೆ ಕಪ್ಪು ಬಾವುಟ ಪ್ರದರ್ಶಿಸಲಾಗಿದೆ ಎಂದು ಯುವ ಕಾಂಗ್ರೆಸ್ ತಿಳಿಸಿದೆ. ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಂತರ ಸಚಿವ ವಿ.ಸೋಮಣ್ಣ ಭಾಗವಹಿಸಿದ್ದ ಕಾರ್ಯಕ್ರಮದ ಸುತ್ತಲು ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಯಿತು.