SHIVAMOGGA LIVE NEWS | BLAST | 2 ಜೂನ್ 2022
ಶಿವಮೊಗ್ಗದ ರಾಗಿಗುಡ್ಡದಲ್ಲಿ ಏಳು ಭಾರಿ ಸ್ಪೋಟ (BLAST) ಸಂಭವಿಸಿದೆ. ಇದರಿಂದ ಸುತ್ತಮುತ್ತಲ ಮನೆಗಳಲ್ಲಿ ಕಂಪನದ ಅನುಭವವಾಗಿದೆ. ಕೆಲವು ಮನೆಗಳ ಗೋಡೆಗಳ ಮೇಲೆ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೆ ಸ್ಪೋಟದ ಸದ್ದು ಕೇಳಿದೆ. ಎಳು ಭಾರಿ ಸ್ಪೋಟ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬೆಳವಣಿಗೆ ರಾಗಿಗುಡ್ಡ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಹುಟ್ಟಿಸುವುದರ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿದೆ.
ಸ್ಪೋಟಕ್ಕೆ ಕಾರಣವೇನು?
ರಾಗಿಗುಡ್ಡದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಸ್ಥಳದಲ್ಲಿ ಸ್ಪೋಟ ಸಂಭವಿಸಿದೆ ಎಂದು ಸ್ಥಳೀಯರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ. ಕಾಮಗಾರಿ ಬೇಗ ಮುಗಿಸುವ ಸಲುವಾಗಿ ಬಂಡೆಗಳನ್ನು ಒಡೆಯಲು ಸ್ಪೋಟಕ ಬಳಸಿರುವ ಸಾದ್ಯತೆ ಇದೆ ಎಂದು ಸ್ಥಳೀಯರು ಆಪಾದಿಸಿದ್ದಾರೆ.
ಗಢಗಢ ನಡುಗಿದ ಅನುಭವ
ಪ್ರತಿ ಭಾರಿ ಸ್ಪೋಟ ಸಂಭವಿಸಿದಾಗಲೂ ರಾಗಿಗುಡ್ಡ ಸುತ್ತಮುತ್ತಲು ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ದಿಢೀರ್ ಸ್ಪೋಟಗಳು ಸಂಭವಿಸಿದ್ದರಿಂದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು. ಆನಂತರ ಪ್ರತಿ ಸ್ಪೋಟದ ಸಂದರ್ಭದಲ್ಲೂ ಜನ ಆತಂಕಗೊಂಡರು. ಕುವೆಂಪು ನಗರದ ಮ್ಯಾಕ್ಸ್ ಪೂರ್ಣೋದಯ ಬಡಾವಣೆಯಲ್ಲಿ ಕಂಪನದ ಅನುಭವವಾಗಿದೆ. ಮನೆಗಳು ಕೂಡ ಬಿರುಕು ಬಿಟ್ಟಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅನುಮತಿಯ ಬಗ್ಗೆ ಅನುಮಾನ
‘ಇಎಸ್ಐ ಆಸ್ಪತ್ರೆಗೆ ನಿರ್ಮಾಣ ಕಾಮಗಾರಿಗಾಗಿ ರಾಗಿಗುಡ್ಡದಲ್ಲಿ ಸ್ಪೋಟ ನಡೆಸಲು ಈ ಮೊದಲು ಪ್ರಯತ್ನ ನಡೆದಿತ್ತು. ಆದರೆ ಹುಣಸೋಡು ಸ್ಪೋಟದ ತೀವ್ರತೆಯ ಪರಿಣಾಮ ಹಿಂದಿನ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅನುಮತಿ ನಿರಾಕರಿಸಿದ್ದರು. ಸ್ಥಳೀಯರಿಗೆ ಸಮಸ್ಯೆ ಆಗಲಿದೆ, ಗುಡ್ಡಕ್ಕೂ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಸ್ಪೋಟಕ್ಕೆ ಅನುಮತಿ ನೀಡಿರಲಿಲ್ಲ. ಜಿಲ್ಲಾಧಿಕಾರಿ ಅವರು ಬದಲಾಗುತ್ತಿದ್ದ ಹಾಗೆ ಸ್ಪೋಟಕ ಸ್ಪೋಟಿಸಲಾಗಿದೆ. ಇದಕ್ಕೆ ಅನುಮತಿ ಇತ್ತೋ ಇಲ್ಲವೋ ಅನ್ನುವುದೆ ಅನುಮಾನವಾಗಿದೆ’ ಎಂದು ಸ್ಥಳೀಯರೊಬ್ಬರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ಡಿಸಿಗೆ ದೂರು ನೀಡಿದ ಸ್ಥಳೀಯರು
ಮತ್ತೊಂದೆಡೆ ಸ್ಪೋಟ ಸಂಭವಿಸುತ್ತಿದ್ದ ಹಾಗೆ ಸ್ಥಳೀಯರು ಆತಂಕಗೊಂಡಿದ್ದಾರೆ. ಅಲ್ಲದೆ ಆಡಳಿತದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ‘ಈ ಭಾಗದಲ್ಲಿ ಯಾವುದೆ ಕಾರಣಕ್ಕೂ ಸ್ಪೋಟಕ್ಕೆ ಅನುಮತಿ ನೀಡಬಾರದು ಎಂದು 2021ರ ಅಕ್ಟೋಬರ್ 1ರಂದು ಮನವಿ ಮಾಡಿದ್ದೆವು. ಈಗ ಸ್ಪೋಟಕ್ಕೆ ಅನುಮತಿ ನೀಡಬಾರದು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಾಗಿಗುಡ್ಡದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣ ಕಾರ್ಯ ಬಿರುಸಾಗಿ ನಡೆಯುತ್ತಿದೆ. ಮಾದರಿ ಇಎಸ್ಐ ಆಸ್ಪತ್ರೆ ನಿರ್ಮಾಣದ ಗುರಿ ಹೊಂದಲಾಗಿದೆ. ಆದರೆ ಕಾಮಗಾರಿಗೆ ವೇಗ ನೀಡಲು ಸ್ಪೋಟಕ ಬಳಕೆ ಮಾಡುತ್ತಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದು ಸಾವಿರ ರೂ. ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮೇಲೆ ಎಸಿಬಿ ದಾಳಿ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.