SHIVAMOGGA LIVE | 27 JUNE 2023
SHIMOGA : ಜಿಲ್ಲೆಯ ವಿಮಾನ ನಿಲ್ದಾಣದಿಂದ ಆಗಸ್ಟ್ 11ರಿಂದ ವಿಮಾನಯಾನ ಸೇವೆ ಆರಂಭವಾಗಲಿದೆ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ (Airport) ರಾಷ್ಟ್ರಕವಿ ಕುವೆಂಪು ಅವರ ಹೆಸರು ನಾಮಕರಣ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಒಕ್ಕಲಿಗರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಸಂಸದ ರಾಘವೇಂದ್ರ ಮಾತನಾಡಿದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆ.11ರಿಂದ ವಿಮಾನಯಾನ ಸೇವೆ ಆರಂಭವಾಗಲಿದೆ. ವಿಮಾನ ನಿಲ್ದಾಣಕ್ಕೆ (Airport) ರಾಷ್ಟ್ರಕವಿ ಕುವೆಂಪು ಅವರ ಹೆಸರು, ರೈಲ್ವೆ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಅವರ ಹೆಸರನ್ನು ಇಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.
ಇದನ್ನೂ ಓದಿ – ತಾಳಗುಪ್ಪ – ಶಿವಮೊಗ್ಗ – ಮೈಸೂರು ರಾತ್ರಿ ರೈಲು ಸೇರಿ ಮೂರು ರೈಲುಗಳ ಸಮಯಲ್ಲಿ ಮಹತ್ವದ ಬದಲಾವಣೆ
ಇನ್ನು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಇಡಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಹೆಸರು ನಾಮಕರಣ ಮಾಡಲಾಯಿತು. ಅದರ ಮುಂದೆ ಕೆಂಪೇಗೌಡ ಅವರ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ಯಡಿಯೂರಪ್ಪ ಅವರು ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೇರವೇರಿಸಿದ್ದರು. ಇವೆರಡು ಪ್ರಮುಖ ಕಾರ್ಯಗಳು ಶಿವಮೊಗ್ಗದವರಿಂದ ಆಗಿದ್ದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ನೆಟ್ ವರ್ಕ್ ಸಮಸ್ಯೆಗೆ ಮುಕ್ತಿ
ಜಿಲ್ಲೆಯಾದ್ಯಂತ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಮುಕ್ತಿ ನೀಡಲು ಮುಂದಡಿ ಇಡಲಾಗಿದೆ. ಜಿಲ್ಲೆಯಲ್ಲಿ 300 ರಿಂದ 400 ಮೊಬೈಲ್ ಟವರ್ಗಳನ್ನು ಅಳವಡಿಸಲಾಗುತ್ತಿದೆ. ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಎಲ್ಲಿಯೇ ಹೋದರು ಇನ್ಮುಂದೆ ನೆಟ್ವರ್ಕ್ ಸಿಗಲಿದೆ. ಡಿಸೆಂಬರ್ ವೇಳೆಗೆ ಎಲ್ಲೆಡೆ ಮೊಬೈಲ್ ನೆಟ್ವರ್ಕ್ ಸಿಗುವಂತಹ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಸದ ರಾಘವೇಂದ್ರ ಹೇಳಿದರು.