ಕ್ಲಸ್ಟರ್‌ ಕಿಚನ್‌ಗೆ ವಿರೋಧ, ಶಿವಮೊಗ್ಗದಲ್ಲಿ ಪ್ರತಿಭಟನೆಗೆ ನಿರ್ಧಾರ, ಯಾವಾಗ? ವಿರೋಧಕ್ಕೆ ಕಾರಣವೇನು?

ಶಿವಮೊಗ್ಗ: ಶಾಲೆಗಳಲ್ಲಿ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೊಳಿಸುವ ಪ್ರಸ್ತಾಪ ಕೈಬಿಟ್ಟು, ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಆಗ್ರಹಿಸಿದೆ. ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ.16ರಂದು ಸೈನ್ಸ್ ಮೈದಾನದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಹನುಮಮ್ಮ ತಿಳಿಸಿದರು. (ಈ ಸುದ್ದಿಯನ್ನು ಇನ್ನು 114 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಜಂಟಿ ನಿರ್ದೇಶಕರು ನ.7ರಂದು ಕ್ಲಸ್ಟರ್ ಕಿಚನ್ ರಚನೆಯ ಸಾಧಕ-ಬಾಧಕಗಳ ಕುರಿತು ಅಭಿಪ್ರಾಯ ಸಲ್ಲಿಸುವಂತೆ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಪ್ರಸ್ತಾಪವನ್ನು ಸಂಘ ತೀವ್ರವಾಗಿ ವಿರೋಧಿಸುತ್ತದೆ ಎಂದರು.

Hanumamma-speaks-against-Cluster-Kitchen

ಶಿಕ್ಷಕರಿಗೆ ಜವಾಬ್ದಾರಿ ಬೇಡ

ಶಿಕ್ಷಕರಿಗೆ ಬಿಸಿಯೂಟದ ಆಡಳಿತಾತ್ಮಕ ಜವಾಬ್ದಾರಿ ವಹಿಸುವುದನ್ನು ಸಂಘ ಮೊದಲಿನಿಂದಲೂ ವಿರೋಧಿಸುತ್ತ ಬಂದಿದೆ. ಶಿಕ್ಷಕರು ಬೋಧನಾ ಕಾರ್ಯ ಮತ್ತು ಶಾಲಾ ಪಠ್ಯಕ್ರಮದತ್ತ ಹೆಚ್ಚಿನ ಗಮನ ಹರಿಸಬೇಕು. 2012ರ ಜೂನ್ 4ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿಯೂಟ ಯೋಜನೆಯನ್ನು ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ಅದೇ ವರ್ಷ ಡಿ.17ರ ಇಲಾಖೆಯ ನಡಾವಳಿಯಂತೆ ಮುಖ್ಯ ಅಡುಗೆಯವರು ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಪದನಿಮಿತ್ತ ಮುಖ್ಯೋಪಾಧ್ಯಾಯರ ಜಂಟಿ ಖಾತೆಯ ಮೂಲಕ ಯೋಜನೆ ನಿರ್ವಹಿಸಲು ಅವಕಾಶವಿದೆ ಎಂದು ಹನುಮಮ್ಮ ಹೇಳಿದರು.

ಮುಖ್ಯೋಪಾಧ್ಯಾಯರು ಜವಾಬ್ದಾರಿ ನಿರ್ವಹಿಸಲು ಸಾಧ್ಯವಿಲ್ಲ ಎಂದರೆ ಮುಖ್ಯ ಅಡುಗೆಯವರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ತೆರೆಯಬಹುದು. ಅಡುಗೆ ಸಿಬ್ಬಂದಿಯಲ್ಲಿಯೇ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವೀಧರರಿದ್ದು, ಯೋಜನೆ ನಿರ್ವಹಿಸುವ ಅರ್ಹತೆ ಮತ್ತು ಅನುಭವ ಹೊಂದಿದ್ದಾರೆ. ಅಗತ್ಯವಿದ್ದರೆ ಅವರ ಕೆಲಸದ ಅವಧಿ ವಿಸ್ತರಿಸಿ ಸಂಪೂರ್ಣ ಜವಾಬ್ದಾರಿ ವಹಿಸಬಹುದು ಎಂದರು.

ಸುಪ್ರೀಂ ಕೋರ್ಟ್ ಆದೇಶವಿದೆ

ಬಿಸಿಯೂಟ ಯೋಜನೆಯು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು, ಶಾಲಾ ಹಾಜರಾತಿ ಸುಧಾರಿಸುವುದು ಹಾಗೂ ಜಾತಿ ಮತ್ತು ಲಿಂಗ ತಾರತಮ್ಯ ನಿವಾರಿಸುವ ಉದ್ದೇಶ ಹೊಂದಿದೆ. ಮಕ್ಕಳಿಗೆ ಶಾಲೆಯಲ್ಲಿಯೇ ತಾಜಾ ಮತ್ತು ಬಿಸಿಯಾದ ಪೌಷ್ಟಿಕ ಆಹಾರ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಈ ಹಿನ್ನೆಲೆ ಸರ್ಕಾರ ಶಾಲೆಗಳಲ್ಲಿ ಅಡುಗೆ ಕೋಣೆ, ಪಾತ್ರೆ, ಗ್ಯಾಸ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಹನುಮಮ್ಮ ತಿಳಿಸಿದರು.

ಶಿಕ್ಷಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಮೊಟ್ಟೆ ಖರೀದಿಯ ಬೆಲೆ ಏರಿಕೆಯೂ ಒಂದಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಸುವ ಮಾದರಿಯಲ್ಲಿ ಕುಕ್ಕುಟ ಮಹಾಮಂಡಳಿಯಿಂದ ಶಾಲೆಗಳಿಗೂ ಮೊಟ್ಟೆ ಪೂರೈಸಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಯಾದರೆ ಕ್ರಮೇಣ ಧಾರ್ಮಿಕ, ಜಾತಿ ಹಾಗೂ ಖಾಸಗಿ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸರ್ಕಾರಿ ಶಾಲೆಗಳು ಇರುವವರೆಗೂ ಬಿಸಿಯೂಟ ಮಕ್ಕಳ ಮೂಲಭೂತ ಹಕ್ಕಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ವ್ಯವಸ್ಥೆ ಜಾರಿಗೊಳಿಸಬಾರದು ಎಂದು ಹನುಮಮ್ಮ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸುನಿತಾ, ಜಿಲ್ಲಾ ಸಂಚಾಲಕ ಎಂ. ನಾರಾಯಣ, ಕೆ.ಎಲ್. ರಾವ್, ಜಯಮ್ಮ, ಚಂದ್ರಮ್ಮ ಇದ್ದರು.