ಬ್ಯಾಂಕ್‌, ಇನ್ಶೂರೆನ್ಸ್‌ ಕಂಪನಿಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ, ಆಗಿದ್ದೇನು?

ಶಿವಮೊಗ್ಗ: ಖಾತೆಯಲ್ಲಿ ಹಣವಿದ್ದರೂ ಆಟೋ ಡೆಬಿಟ್ ಮೂಲಕ ವಿಮೆ ಕಂತು ಪಾವತಿಸಿಕೊಳ್ಳದೆ ಹಾಗೂ ಪೂರ್ವ ಸೂಚನೆ ನೀಡದೆ ಪಾಲಿಸಿ ರದ್ದು ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದ ಕೆನರಾ ಬ್ಯಾಂಕ್ ಹಾಗೂ ಕೆನರಾ ಎಚ್‌ಎಸ್‌ಬಿಸಿ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡುವಂತೆ ಆದೇಶಿಸಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಜಿಲ್ಲೆಯ ಬಾರಂಗಿಯ ಸುಮಾ ಅವರ ಪತಿ ಮೃತ ನಟರಾಜ್‌ರಾಯ್ ಅವರು, ಕೆನರಾ ಬ್ಯಾಂಕ್ ಸೊರಬ ಶಾಖೆಯ ಮೂಲಕ ಕೆನರಾ ಜೀವ ಬೀಮಾ ಸ್ಮಾರ್ಟ್ ಸುರಕ್ಷಾ ಪ್ಲ್ಯಾನ್ ಪಡೆದಿದ್ದರು. ವಾರ್ಷಿಕ ಕಂತು ₹7,854.80ನ್ನು ಖಾತೆಯಿಂದ ಆಟೋ ಡೆಬಿಟ್ ಮಾಡಿಕೊಳ್ಳಬೇಕಿತ್ತು. ಅದನ್ನು ಬ್ಯಾಂಕ್ ಮಾಡಿರಲಿಲ್ಲ. 2023ರ ಮೇ ತಿಂಗಳಲ್ಲಿ ನಟರಾಜ್‌ರಾಯ್ ನಿಧನರಾದಾಗ, ವಿಮಾ ಸಂಸ್ಥೆ ನೋಟಿಸ್ ನೀಡದೆ ಪಾಲಿಸಿ ರದ್ದಾಗಿದೆ ಎಂದು ಕ್ಲೇಮ್ ತಿರಸ್ಕರಿಸಿತ್ತು.

Shimoga-Consumer-Court.

ಇದನ್ನು ಪ್ರಶ್ನಿಸಿ ಸುಮಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಆಯೋಗವು, ಬ್ಯಾಂಕ್ ಮತ್ತು ವಿಮಾ ಸಂಸ್ಥೆಯಿಂದ ಸೇವಾ ನ್ಯೂನ್ಯತೆಯಾಗಿದೆ ಎಂದು ತೀರ್ಮಾನಿಸಿತು. ಪಾಲಿಸಿಯ ಒಟ್ಟು ಮೊತ್ತ ₹20 ಲಕ್ಷವನ್ನು ಜುಲೈ 4, 2023ರಿಂದ ಅನ್ವಯವಾಗುವಂತೆ ಶೇ.8ರಷ್ಟು ಬಡ್ಡಿಯೊಂದಿಗೆ 45 ದಿನದೊಳಗೆ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಅವರ ಪೀಠ ಆದೇಶಿಸಿದೆ. ಜೊತೆಗೆ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ ₹50,000 ಸಾವಿರ ದಂಡ ಮತ್ತು ವ್ಯಾಜ್ಯದ ಖರ್ಚಿಗೆ ₹10,000ವನ್ನು ಸುಮಾ ಅವರಿಗೆ ನೀಡಬೇಕು ಎಂದು ಆದೇಶಿಸಿದೆ.