SHIVAMOGGA LIVE NEWS |CRIME ALERT | 8 ಏಪ್ರಿಲ್ 2022
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದೂರು ನೀಡಲು ಕಾರಣವೇನು?
ಬೆಂಗಳೂರಿನಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎರಡು ಭಿನ್ನ ಹೇಳಿಕೆ ನೀಡಿದ್ದರು. ಉರ್ದು ಭಾಷೆ ಮಾತನಾಡಿದ್ದರಿಂದಲೇ ಚಂದ್ರು ಹತ್ಯೆಯಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದರು. ಆನಂತರ ಹೇಳಿಕೆ ಬದಲಿಸಿದ್ದರು. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾರಣವಾಗುತ್ತಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿ, ಜಯನಗರ ಠಾಣೆಗೆ ದೂರ ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಧಾರ್ಮಿಕ ಭಾವನೆ ಕೆರಳಿಸುವುದು ಮತ್ತು ಸಾಮಾಜಿಕ ಶಾಂತಿ ಹದಗೆಡಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಶತ್ರುತ್ವ ಬೆಳೆಯಲು ಕಾರಣವಾಗಿ, ಅದರ ಲಾಭ ಪಡೆಯುವ ಉದ್ದೇಶವನ್ನು ಅವರು ಹೊಂದಿದ್ದಾರೆ. ರಾಜ್ಯದಲ್ಲಿ ಶಾಂತಿ ಕದಡಲು ಮುಂದಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 295ಎ, 298, 505ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗೃಹ ಸಚಿವರ ವಿರುದ್ಧ ರಾಜ್ಯಾದ್ಯಂತ ದೂರು
ದೂರು ನೀಡಿದ ಬಳಿಕ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್ ಅವರು, ‘ಉರ್ದು ಭಾಷೆ ಮಾತನಾಡದಿದ್ದಕ್ಕೆ ಚಂದ್ರು ಹತ್ಯೆ ಮಾಡಲಾಗಿದೆ ಎಂದು ಗೃಹ ಸಚಿವರು ಹೇಳಿಕೆ ಕೊಟ್ಟಿದ್ದರು. ಆನಂತರ ಹೇಳಿಕೆ ಬದಲಿಸಿದ್ದಾರೆ. ಸಮಾಜದ ನೆಮ್ಮದಿ ಹಾಳು ಮಾಡಲು ಉದ್ದೇಶಪೂರ್ವಕಾಗಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಅಲ್ಲದೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ರಾಜ್ಯಾದ್ಯಂತ ದೂರು ನೀಡಲಾಗುತ್ತಿದೆ’ ಎಂದು ತಿಳಿಸಿದರು.
ದೂರು ಸ್ವೀಕರಿಸಲು ಒಪ್ಪಲಿಲ್ಲ
ಇನ್ನು, ದೂರು ಸ್ವೀಕರಿಸಲು ಜಯನಗರ ಠಾಣೆ ಪೊಲೀಸರು ನಿರಾಕರಿಸಿದರು. ಈ ವೇಳೆ ಪೊಲೀಸರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಯಿತು. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸದ ಘಟನೆಗೆ ತಾವು ದೂರು ಸ್ವೀಕರಿಸಲು ಸಾದ್ಯವಾಗುವುದಿಲ್ಲ ಎಂದು ಇನ್ಸ್ ಪೆಕ್ಟರ್ ತಿಳಿಸಿದರು. ಆದರೆ ಗೃಹ ಸಚಿವರು ಶಾಂತಿ ಕದಲು ಯತ್ನಿಸಿದ್ದಾರೆ. ಅವರ ವಿರುದ್ಧ ರಾಜ್ಯಾದ್ಯಂತ ದೂರು ಸಲ್ಲಿಸಬಹುದಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡು ಪಟ್ಟು ಹಿಡಿದರು.
ಕೊನೆಗೆ ದೂರು ಸ್ವೀಕರಿಸಿದ ಪೊಲೀಸರು, ಹಿರಿಯ ಅಧಿಕಾರಿಗಳಿಗೆ ಪ್ರತಿಯನ್ನು ವರ್ಗಾಯಿಸುವುದಾಗಿ ತಿಳಿಸಿದರು.
CRIME ALERT
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200