ಶಿವಮೊಗ್ಗ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಜೆಡಿಎಸ್ ಮುಖಂಡರು ಹಾಗೂ ಬೆಂಬಲಿಗರು ಸಂತಾಪ ಸೂಚಿಸಿದ್ದಾರೆ.
ನಗರದ ನೆಹರು ರಸ್ತೆಯಲ್ಲಿರುವ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಿದರು.

ದೇವೇಗೌಡರ ರಾಜಕೀಯ ಏಳುಬೀಳುಗಳ ಸುದೀರ್ಘ ಪಯಣದಲ್ಲಿ ಆದರ್ಶ ಗೃಹಿಣಿಯಾಗಿ ಸಾಥ್ ನೀಡಿದ್ದ ಚೆನ್ನಮ್ಮ ಅವರ ಸರಳತೆಯನ್ನು ಈ ಸಂದರ್ಭ ಪಕ್ಷದ ಪ್ರಮುಖರು ಸ್ಮರಿಸಿದರು.
ಜಿಲ್ಲೆಯ ಗಣ್ಯರಿಂದ ಶ್ರದ್ಧಾಂಜಲಿ
ತಮ್ಮ ಸರಳತೆ, ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳ ಸಾಕಾರ ಮೂರ್ತಿಗಳಾಗಿದ್ದ ತಾಯಿ ಶ್ರೀಮತಿ ಚೆನ್ನಮ್ಮನವರ ಅಗಲಿಕೆಯಿಂದ ಶ್ರೀ ದೇವೇಗೌಡರ ದೊಡ್ಡ ಕುಟುಂಬ ಮಾತ್ರವಲ್ಲ, ಜೆಡಿಎಸ್ ಪಕ್ಷದ ಕಾರ್ಯಕರ್ತರೂ ಕೂಡ ಮಾತೃಛಾಯೆಯನ್ನು ಕಳೆದುಕೊಂಡಂತಾಗಿದೆ. ಅವರ ಮನೆದೇವರಾದ ಹರದನಹಳ್ಳಿಯ ಶ್ರೀ ಈಶ್ವರ ದೇವರು ತನ್ನ ನೆಚ್ಚಿನ ಭಕ್ತೆಯಾಗಿದ್ದ ಶ್ರೀಮತಿ ಚೆನ್ನಮ್ಮನವರಿಗೆ ಸದ್ಗತಿಯನ್ನು ದಯಪಾಲಿಸಲಿ.
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ಸರಳತೆಯ ಸಾಕಾರ ಮೂರ್ತಿಯಾಗಿದ್ದ ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ.
ಮಧು ಬಂಗಾರಪ್ಪ, ಮಾಜಿ ಸಚಿವ
ಚೆನ್ನಮ್ಮನವರು ವಿಧಿವಶರಾಗಿರುವುದು ತೀವ್ರ ನೋವನ್ನುಂಟು ಮಾಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಾರೆ ಎನ್ನುತ್ತಿರುವಾಗಲೇ ಅವರು ನಮ್ಮೆಲ್ಲರನ್ನು ಅಗಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಜೀವನ ಸಂಗಾತಿಯಾಗಿ ಅವರ ಜೀವನದುದ್ದಕ್ಕೂ ಜತೆಗೆ ನಿಂತು ಅವರ ಏಳಿಗೆಗೆ ಎಲೆಮರೆ ಕಾಯಿಯಂತೆ ಇದ್ದವರು. 85 ವರ್ಷಗಳ ಸಾರ್ಥಕ ಬದುಕನ್ನು ನಡೆಸಿದ ಮಾತೃ ಸ್ವರೂಪಿ ಚೆನ್ನಮ್ಮನವರು ನಮ್ಮನೆಲ್ಲ ಅಗಲಿರುವುದು ತುಂಬಾ ನೋವಿನ ಸಂಗತಿ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಕುಟುಂಬದ ಮೌಲ್ಯಗಳನ್ನು ಅಚ್ಚುಕಟ್ಟಾಗಿ ಕಾಪಾಡುತ್ತಾ, ಹೆಚ್.ಡಿ. ದೇವೇಗೌಡರ ಸಾರ್ವಜನಿಕ ಜೀವನದ ಪಯಣದಲ್ಲಿ ಮೌನ ಪ್ರೇರಣೆ ಮತ್ತು ದೃಢ ಬೆಂಬಲವಾಗಿ ನಿಂತ ಅವರ ವ್ಯಕ್ತಿತ್ವ ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ಸಾರ್ವಜನಿಕ ಬದುಕಿಗೆ ನೇರವಾಗಿ ಸಂಬಂಧಿಸಿದ ಒಂದು ಸೌಮ್ಯ ಮತ್ತು ಆದರ್ಶ ವ್ಯಕ್ತಿತ್ವವನ್ನು ನಾಡು ಕಳೆದುಕೊಂಡಿದೆ.
ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ
ಚೆನ್ನಮ್ಮ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಭಗವಂತ ಕರುಣಿಸಲಿ.
ಗೋಪಾಲಕೃಷ್ಣ ಬೇಳೂರು, ಸಾಗರ ಶಾಸಕ