ಶಿವಮೊಗ್ಗ: ರಾಜ್ಯ ರಾಜಕಾರಣದಲ್ಲಿನ ದಿಢೀರ್ ಬೆಳವಣಿಗೆಯ ಬಿಸಿ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ತಟ್ಟಿದೆ. ಈಗಾಗಲೇ ಪೆಂಡಾಲ್ ಮತ್ತು ವೇದಿಕೆ ಸಿದ್ಧವಾಗಿದೆ. ಆದರೆ ಕಾರ್ಯಕ್ರಮ ನಡೆಯಲಿದೆಯೇ ಎಂಬ ಗೊಂದಲ ಮೂಡಿದೆ.
ಏನಿದು ಕಾರ್ಯಕ್ರಮ?
ರಾಜ್ಯದ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಶಂಕುಸ್ಥಾಪನೆ ಕಾರ್ಯಕ್ರಮ ಜೂನ್ 1ರಂದು ನಿಗದಿಯಾಗಿತ್ತು. ಶಿಕ್ಷಣ ಇಲಾಖೆ ವತಿಯಿಂದ ನಡೆಯಬೇಕಿದ್ದ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸಬೇಕಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸುವುದು ಮತ್ತು ಆ ಮಕ್ಕಳ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಊಟ ಮಾಡಲು ಸಮಯ ನಿಗದಿಪಡಿಸಲಾಗಿತ್ತು.

ಪೆಂಡಾಲ್, ಸ್ಟೇಜ್, ಚೇರ್ ರೆಡಿ
ಫ್ರೀಡಂ ಪಾರ್ಕ್‌ನಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ವೇದಿಕೆ ಎಡ ಮತ್ತು ಬಲ ಬದಿಯಲ್ಲಿ ಇನ್ನೂ ಪೆಂಡಾಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ವೇದಿಕೆ ನಿರ್ಮಾಣ, ಚೇರ್‌ಗಳನ್ನು ಕೂಡ ಹಾಕಲಾಗುತ್ತಿದೆ.
ಕಾರ್ಯಕ್ರಮ ನಡೆಯುತ್ತೋ? ಇಲ್ಲವೋ?
ಬೃಹತ್ ಪೆಂಡಾಲ್ ನಿರ್ಮಾಣ ಕಾರ್ಯ ನಡೆಯುತ್ತಿದ್ದರು ಕಾರ್ಯಕ್ರಮದ ಕುರಿತಾಗಿ ಅನಿಶ್ಚಿತತೆ ಇದೆ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಕಾರ್ಯಕ್ರಮದ ಕುರಿತಾಗಿ ಗೊಂದಲದಲ್ಲಿದ್ದಾರೆ. ರಾಜ್ಯ ರಾಜಕಾರಣದಲ್ಲಿನ ದಿಢೀರ್ ಬೆಳವಣಿಗೆಗಳು ಕಾರ್ಯಕ್ರಮ ನಡೆಯಲಿದೆಯೋ ಮುಂದೂಡಲಾಗುತ್ತದೆಯೋ ಎಂಬ ಗೊಂದಲ ಮೂಡಿಸಿದೆ.

ಮಿನಿಸ್ಟರ್ ಏನಂದ್ರು?
ಇನ್ನು, ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದ 45 ಸಾವಿರ ಶಾಲೆಗಳು ನಿಗದಿಯಂತೆ ಜೂನ್ 1ರಂದು ಆರಂಭವಾಗಲಿವೆ. ಶಾಲೆಗಳ ಪುನಾರಂಭದ ಸಂದರ್ಭ ಮಕ್ಕಳ ಸ್ವಾಗತಕ್ಕೆ ಎಲ್ಲ ವ್ಯವಸ್ಥೆಯಾಗಿದೆ. ಶಿವಮೊಗ್ಗದಲ್ಲಿ ನಿಗದಿಯಾಗಿದ್ದ ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ಕಾರ್ಯಕ್ರಮದ ಬಗ್ಗೆ ತಿಳಿಸುತ್ತೇನೆ. ಬೆಂಗಳೂರಿಗೆ ಹೋಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
