ಶಿವಮೊಗ್ಗ : ಜಿಲ್ಲೆಯಲ್ಲಿ ಈವರೆಗೆ ಯಾವುದೇ ಹಕ್ಕಿಜ್ವರ (Bird Flu) ಪ್ರಕರಣ ವರದಿಯಾಗಿಲ್ಲ. ಆದರೂ ಸಾರ್ವಜನಿಕರು ಹಕ್ಕಿಜ್ವರ ಬಾರದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಜ್ವರ, ಉಸಿರಾಟದ ತೊಂದರೆ ಇತರೆ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಹೆಚ್5ಎನ್1(ಹಕ್ಕಿಜ್ವರ) ಹಾಗೂ ಇತರೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು.
ಡಿಸಿ ಹೇಳಿದ 4 ಪಾಯಿಂಟ್
ಹಕ್ಕಿಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಎನ್1 ವೈರಸ್ನಿಂದ ಹರಡುವ ರೋಗ. ಇದು ಟರ್ಕಿ, ಗಿನಿ ಕೋಳಿ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ. ಇದು ಸಾಂಕ್ರಾಮಿಕ ರೋಗವಾಗಿದ್ದು ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತವೆ. ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಪ್ರಕರಣ ಕಂಡು ಬಂದಿಲ್ಲ. ಆದರೂ ಹಕ್ಕಿಜ್ವರ ಕುರಿತು ಮುಂಜಾಗೃತಿ ವಹಿಸಬೇಕು. ಸಾಮಾನ್ಯವಾಗಿ ಹಕ್ಕಿಜ್ವರ ಹೆಚ್1ಎನ್1 ಜ್ವರದ ಲಕ್ಷಣಗಳಂತೆಯೇ ಇರುತ್ತದೆ. ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಬೇಧಿಯೂ ಆಗಬಹುದು. ಮುಖ್ಯವಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಗಳು ಅಥವಾ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು, ಬಾತುಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಶಂಕಿತ ಹಕ್ಕಿಜ್ವರ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು. ಒಂದು ವೇಳೆ ಸಂಪರ್ಕಕೆ ಬಂದಲ್ಲಿ ತಮ್ಮ ಕೈಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಂಡು ಬಟ್ಟೆ ಬದಲಾಯಿಸಬೇಕು. ಮುಂದಿನ ನಾಲ್ಕು ದಿನಗಳವರೆಗೆ ದೇಹದ ಉಷ್ಣಾಂಶದಲ್ಲಾಗುವ ಬದಲಾವಣೆ ಗಮನಿಸಬೇಕು. ಒಂದು ವೇಳೆ ಜ್ವರ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಜಿಲ್ಲೆಯ ಪಕ್ಷಿಧಾಮಗಳು ಮತ್ತು ಪೌಲ್ಟ್ರಿಗಳಲ್ಲಿ ನಿಯಮಿತವಾಗಿ ಪಕ್ಷಿಗಳ ಕಡೆ ನಿಗಾ ವಹಿಸಬೇಕು. ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಪಶುಪಾಲನಾ ಇಲಾಖೆಯ ವೈದ್ಯರು ಪಕ್ಷಿಧಾಮ ಮತ್ತು ಪೌಲ್ಟ್ರಿಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಬೇಕು. ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಐಇಸಿ ಮೂಲಕ ಜಾಗೃತಿ ಮೂಡಿಸಿ, ಪಿಡಿಓಗಳು ಕೋಳಿ ಜ್ವರದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್, ಡಿಹೆಚ್ಓ ಡಾ.ನಟರಾಜ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಆರ್ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಟಿಹೆಚ್ಓ ಗಳು ಹಾಜರಿದ್ದರು.
ಇದನ್ನೂ ಓದಿ » ವಿಮಾನ ದಿಢೀರ್ ರದ್ದು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗರಂ, ಆಗಿದ್ದೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200