ಕೂಡಲಿ ಚಿನ್ನದ ಪಾದುಕೆ ಕಳವು ಕೇಸ್‌ಗೆ ಬಿಗ್‌ ಟ್ವಿಸ್ಟ್‌, ಮಾನನಷ್ಟ ಮೊಕದ್ದಮೆ ಕೈಗೊಳ್ಳಲು ನಿರ್ಧಾರ

ಶಿವಮೊಗ್ಗ: ಕೂಡಲಿ ಶೃಂಗೇರಿ ಮಠದ ಚಿನ್ನದ ಪಾದುಕೆಗಳು ಕಳುವಾಗಿವೆ ಎಂದು ದೂರು ನೀಡಿ, ತಮ್ಮನ್ನು ಪ್ರಕರಣದಲ್ಲಿ ಅನುಮಾನಕ್ಕೆ ಗುರಿಪಡಿಸುವ ರೀತಿ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದು ಮಠದ ಭಕ್ತ ಶ್ರೀನಿವಾಸ ಅಯ್ಯರ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ ಅಯ್ಯರ್‌, ‘₹70 ಲಕ್ಷ ಮೌಲ್ಯದ ಚಿನ್ನದ ಪಾದುಕೆಗಳು ಕಳುವಾಗಿವೆ ಎಂದು ಮಠದ ವ್ಯವಸ್ಥಾಪಕರೆಂದು ಹೇಳಿಕೊಂಡ ರಮೇಶ್ ಹುಲಿಮನಿ ಅವರು 2024ರ ಆಗಸ್ಟ್ 19ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳು, ತಮ್ಮ ಸೂಚನೆಯಂತೆ ದೂರು ದಾಖಲಾಗಿಲ್ಲ ಎಂದು ಆರೋಪಿಸಿ ಆಗಸ್ಟ್ 28ರಂದು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಐಜಿಗೆ ಪತ್ರ ಬರೆದಿದ್ದರು. ಈ ದೂರಿನಲ್ಲಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹಾಗೂ ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು’ ಎಂದು ಆರೋಪಿಸಿದರು.

Kudli-Srinivas-Iyer-holds-press-meet-about-Kudli-Mutt

‘ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಚಿನ್ನದ ಪಾದುಕೆಗಳು ಮಠದ ಬ್ಯಾಂಕ್ ಲಾಕರ್‌ನಲ್ಲಿಯೇ ಇರುವುದನ್ನು ಪತ್ತೆಹಚ್ಚಿದ್ದಾರೆ. ಲಾಕರ್ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳ ಉಸ್ತುವಾರಿಯಲ್ಲಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಲಾಕರ್‌ನಿಂದ ವಶಪಡಿಸಿಕೊಂಡಿದ್ದ ಚಿನ್ನದ ಪಾದುಕೆಗಳನ್ನು ಮಠಕ್ಕೆ ಹಿಂದಿರುಗಿಸಲಾಗಿದೆʼ ಎಂದು ಹೇಳಿದರು.

‘ಎಸ್‌ಪಿ ಹಾಗೂ ಡಿಐಜಿಗೆ ಸಲ್ಲಿಸಿದ್ದ ದೂರಿನಲ್ಲಿ ತಮ್ಮನ್ನು ಪ್ರಕರಣದಲ್ಲಿ ಅನುಮಾನಕ್ಕೆ ಗುರಿಪಡಿಸುವ ರೀತಿಯಲ್ಲಿ ಆರೋಪ ಮಾಡಲಾಗಿತ್ತು. ತನಿಖೆಯಲ್ಲಿ ಪಾದುಕೆಗಳು ಕಳುವಾಗಿಲ್ಲ ಎಂಬುದು ಬೆಳಕಿಗೆ ಬಂದಿರುವ ಹಿನ್ನೆಲೆ, ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ’

– ಶ್ರೀನಿವಾಸ ಅಯ್ಯರ್‌, ಕೂಡಲಿ ಮಠದ ಭಕ್ತ

ಸುದ್ದಿಗೋಷ್ಠಿಯಲ್ಲಿ ಪರಮೇಶ್ವರಪ್ಪ, ಶ್ರೀನಿವಾಸ ಹಾಗೂ ರಂಗನಾಥ ಇದ್ದರು.