ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ವಿಮಾನ ಹಾರಾಟ ಶುರುವಾಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ ವತಿಯಿಂದ ಸೋಗಾನೆ ವಿಮಾನ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಅರ್ಧ ಗಂಟೆಗೆ ಒಮ್ಮೆ ಈ ಮಾರ್ಗದಲ್ಲಿ KSRTC ಬಸ್ಸು ಸಂಚರಿಸಲಿದೆ. ಆದರೆ ನಿತ್ಯ ಸಾವಿರಾರು ಜನರು ಪ್ರಯಾಣಿಸುವ ರೈಲ್ವೆ ನಿಲ್ದಾಣಕ್ಕೆ ಸಾರಿಗೆ ನಿಗಮ ಬಸ್ಸುಗಳನ್ನು ಒದಗಿಸದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವಿಮಾನ ನಿಲ್ದಾಣಕ್ಕೆ ಬಸ್ಸುಗಳು
ಆ.31ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಆರಂಭವಾಗಿದೆ. ಸದ್ಯ ಒಂದು ವಿಮಾನ ಹಾರಾಟ ನಡೆಸುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ – ವಿಮಾನ ನಿಲ್ದಾಣ – ಕಾಚಿನಕಟ್ಟೆ ಮಾರ್ಗದಲ್ಲಿ KSRTC ಬಸ್ ಸಂಚಾರ ಆರಂಭಿಸಲಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಪ್ರತಿ ಅರ್ಧ ಗಂಟೆಗೆ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಈ ಭಾಗದ ಕಾಚಿನಕಟ್ಟೆ, ಕೊರ್ಲಹಳ್ಳಿ, ಸಂತೆ ಕಡೂರು, ಪುಟ್ಟಪ್ಪ ಕ್ಯಾಂಪ್, ಒಡ್ಡಿನಕೊಪ್ಪ, ಜ್ಯೋತಿನಗರ, ಎಂಆರ್‌ಎಸ್ ಭಾಗದ ಜನರಿಗೆ ಅನುಕೂಲವಾಗಲಿದೆ.
ರೈಲ್ವೆ ನಿಲ್ದಾಣಕ್ಕೆ ಇಲ್ಲ ಬಸ್
ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ತಿರುಪತಿ, ಚೆನ್ನೈ ಜೊತೆಗೆ ಶಿವಮೊಗ್ಗ ಜಿಲ್ಲೆ ರೈಲ್ವೆ ಸಂಪರ್ಕ ಹೊಂದಿದೆ. ನಿತ್ಯ ಹತ್ತಕ್ಕು ಹೆಚ್ಚು ರೈಲುಗಳು ಶಿವಮೊಗ್ಗ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಆದರೆ ರೈಲಿನಲ್ಲಿ ಬರುವ ಪ್ರಯಾಣಿಕರು ರೈಲ್ವೆ ನಿಲ್ದಾಣದಿಂದ KSRTC ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ದುಬಾರಿ ಬೆಲೆ ತೆತ್ತು ಆಟೋಗಳಲ್ಲಿ ಸಂಚರಿಸಬೇಕಾಗಿದೆ.
ನಿಲ್ದಾಣ ತಲುಪುವಷ್ಟರಲ್ಲಿ ಹೈರಾಣು
ಬೆಳಗ್ಗೆ 4.30ಕ್ಕೆ ಶಿವಮೊಗ್ಗ ತಲುಪುವ ಮೈಸೂರು ತಾಳಗುಪ್ಪ ಎಕ್ಸ್‌ಪ್ರೆಸ್, ಬೆಳಗ್ಗೆ ಹೊರಡುವ ಜನ ಶತಾಬ್ದಿ ರೈಲು, ರಾತ್ರಿ ಬೆಂಗಳೂರಿನಿಂದ ಬರುವ ಎಕ್ಸ್‌ಪ್ರೆಸ್ ಮತ್ತು ಜನ ಶತಾಬ್ದಿ ರೈಲು ಪ್ರಯಾಣಿಕರು ಮತ್ತು ರಾತ್ರಿ ಶಿವಮೊಗ್ಗದಿಂದ ತೆರಳುವ ತಾಳಗುಪ್ಪ ಮೈಸೂರು ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರು ನಿಲ್ದಾಣ ತಲುಪಲು ಕಷ್ಟಪಡುತ್ತಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸುಗಳೇ ನಿಲ್ಲದ ಕಡೆ ಹೈಟೆಕ್ ತಂಗುದಾಣ, ನೂರಾರು ಪ್ರಯಾಣಿಕರು ನಿತ್ಯ ಕಾಯುವ ಕಡೆ ಕೇಳುವವರೇ ಇಲ್ಲ
ನಡೆದು ಬರುತ್ತಾರೆ ಪ್ರಯಾಣಿಕರು
ಸೊರಬ, ಶಿಕಾರಿಪುರದಿಂದ ರೈಲ್ವೆ ನಿಲ್ದಾಣಕ್ಕೆ ಬರುವವರು ಸದ್ಯ ಫ್ರೀಡಂ ಪಾರ್ಕ್ ಬಳಿ ಬಸ್ ಇಳಿದು ನಡೆದುಕೊಂಡೇ ಬರುತ್ತಾರೆ. ಸಾಗರ, ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಬರುವವರು ಬಸ್ ನಿಲ್ದಾಣದಿಂದ ಆಟೋಗಳನ್ನು ಅಥವಾ ಖಾಸಗಿ ಬಸ್ಸಿನಲ್ಲಿ ಹರಸಾಹಸ ಮಾಡಿಕೊಂಡು ರೈಲ್ವೆ ನಿಲ್ದಾಣದವರೆಗೆ ಬರುವಂತಾಗಿದೆ. ಇದೆ ಕಾರಣಕ್ಕೆ ರೈಲ್ವೆ ಸಮಯಕ್ಕೆ ಹೊಂದಿಕೆ ಆಗುವ ಹಾಗೆ ಈ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಅನ್ನುವುದು ಪ್ರಯಾಣಿಕರ ಆಗ್ರಹ.
ಕೆಎಸ್‌ಆರ್‌ಟಿಸಿ ಬಸ್ ಹತ್ತದ ಜನ
ಈ ಕುರಿತು ಶಿವಮೊಗ್ಗ ಲೈವ್.ಕಾಂಗೆ ಪ್ರತಿಕ್ರಿಯೆ ನೀಡಿದೆ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಜಿಲ್ಲಾ ಅಧಿಕಾರಿ ವಿಜಯಕುಮಾರ್, ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಖಾಸಗಿ ಸಿಟಿ ಬಸ್ಸುಗಳ ವ್ಯವಸ್ಥೆ ಇದೆ. ಆದ್ದರಿಂದ ಜನರು ಇವುಗಳ ಮೇಲೆ ಅವಲಂಬಿತವಾಗಿದ್ದಾರೆ. ಈಗ ಆರು ತಿಂಗಳ ಹಿಂದೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿದ್ದೆವು. ಎರಡ್ಮೂರು ಜನರು ಮಾತ್ರ ಬಸ್ಸು ಹತ್ತುತ್ತಿದ್ದರು. ರೈಲ್ವೆ ನಿಲ್ದಾಣಕ್ಕೆ ಬರುವ ಬಹುತೇಕರು ಶಿವಮೊಗ್ಗ ನಗರದವರೆ ಅಗಿರುತ್ತಾರೆ. ಅವರು ರೈಲಿನಲ್ಲಿ ಬಂದು ತಮ್ಮ ಬಡಾವಣೆತ್ತ ತೆರಳುತ್ತಾರೆಯೇ ವಿನಃ ಬಸ್ ನಿಲ್ದಾಣಕ್ಕೆ ಬರುವುದಿಲ್ಲ. ಬೆಳಗ್ಗೆ ಜನ ಶತಾಬ್ದಿಗಾಗಿಯೂ ಬಸ್ ವ್ಯವಸ್ಥೆ ಮಾಡಿದ್ದೆವು. ಅದು ಉಪಯೋಗಕ್ಕೆ ಬರಲಿಲ್ಲ. ಮುಂದೆ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ವ್ಯವಸ್ಥೆ ಮಾಡಬೇಕಿದೆ. ಆಗ ರೈಲ್ವೆ ನಿಲ್ದಾಣಕ್ಕೂ ಬಸ್ ತೆರಳುವಂತೆ ಮಾಡಲಾಗುತ್ತದೆ.
ಇದನ್ನೂ ಓದಿ – ‘ಶಿವಮೊಗ್ಗ ನಗರಕ್ಕೆ ಮಂಜೂರಾಗಿದ್ದ ಸರ್ಕಾರಿ ಬಸ್ಸುಗಳು ಎಲ್ಲಿ?’
ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್ಸುಗಳು ಆರಂಭಿಸುವಂತೆ ಬೇಡಿಕೆ ಇದೆ. ಮಹಿಳೆಯರಿಗೆ ಶಕ್ತಿ ಯೋಜನೆಯ ಲಾಭ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಪಾಸ್ ವ್ಯವಸ್ಥೆಯಾಗಲಿದೆ. ಇದೇ ಬಸ್ಸುಗಳು ರೈಲ್ವೆ ನಿಲ್ದಾಣದ ಕಡೆಗೆ ಸಂಚರಿಸಿದರೆ ರೈಲ್ವೆ ಪ್ರಯಾಣಿಕರು ನಗರದ ವಿವಿಧೆಡೆಗೆ ತೆರಳಲು ಅನುಕೂಲವಾಗಲಿದೆ.