ಶಿವಮೊಗ್ಗದಲ್ಲಿ ನವೆಂಬರ್ ತಿಂಗಳಿಡೀ ಉಚಿತ ಮಧುಮೇಹ ತಪಾಸಣಾ ಶಿಬಿರ, ಎಲ್ಲಿ?

ಶಿವಮೊಗ್ಗ: ‘ವಿಶ್ವ ಮಧುಮೇಹ ದಿನದ ಅಂಗವಾಗಿ ಮೆಟ್ರೋ ಯುನೈಟೆಡ್ ಹೆಲ್ತ್‌ಕೇರ್ ಆಸ್ಪತ್ರೆ ವತಿಯಿಂದ ನವೆಂಬರ್ ತಿಂಗಳಿಡೀ ಉಚಿತ ಮಧುಮೇಹ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ಹಾಗೂ ಮಧುಮೇಹಕ್ಕೆ ಸಂಬಂಧಿಸಿದ ರಕ್ತ ಪರೀಕ್ಷೆಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು’ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಪಿ.ಎಲ್.ಎನ್. ಆಚಾರ್ ತಿಳಿಸಿದರು. (ಈ ಸುದ್ದಿಯನ್ನು ಇನ್ನು 82 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಆಸ್ಪತ್ರೆ ಕಳೆದ ಒಂದು ದಶಕದಿಂದ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. ವಿವಿಧ ವಿಭಾಗಗಳ ತಜ್ಞ ವೈದ್ಯರು, ನುರಿತ ಸಿಬ್ಬಂದಿ ಹಾಗೂ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳೊಂದಿಗೆ ಸೇವೆ ಸಲ್ಲಿಸುತ್ತಿದೆ ಎಂದರು.

Metro-United-Hospital-press-meet-in-Shivamogga

ಇಂದಿನ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯಿಂದ ಮಧುಮೇಹ ಸಮಸ್ಯೆ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ನಿಯಂತ್ರಣ ಸಾಧ್ಯ. ಈ ಹಿನ್ನೆಲೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಪಿ.ಎಲ್.ಎನ್. ಆಚಾರ್ ತಿಳಿಸಿದರು.

ಮಧುಮೇಹದಿಂದ ಕಣ್ಣು, ಮೂತ್ರಪಿಂಡ ಹಾಗೂ ಹೃದಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ರೋಗ ಪತ್ತೆಯಾಗುವ ವೇಳೆಗೆ ಕೆಲವರಲ್ಲಿ ಈಗಾಗಲೇ ಆರೋಗ್ಯ ಸಮಸ್ಯೆಗಳು ಆರಂಭವಾಗಿರುತ್ತವೆ. ಹೀಗಾಗಿ ಆರಂಭಿಕ ರೋಗ ಪತ್ತೆಗೆ ಆದ್ಯತೆ ನೀಡುವುದು ಅಗತ್ಯ. ಆಹಾರ ನಿಯಂತ್ರಣ, ನಿಯಮಿತ ವ್ಯಾಯಾಮ ಹಾಗೂ ವೈದ್ಯರ ಸಲಹೆ ಪಾಲಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು.

– ಡಾ. ತೇಜಸ್ವಿ, ಆಸ್ಪತ್ರೆಯ ಸಿಇಒ ಹಾಗೂ ವೈದ್ಯಕೀಯ ನಿರ್ದೇಶಕ

ಮೆಟ್ರೋ ಯುನೈಟೆಡ್ ಹೆಲ್ತ್‌ಕೇರ್ ಆಸ್ಪತ್ರೆ ಆಯೋಜಿಸಿರುವ ಮಧುಮೇಹ ಜಾಗೃತಿ ಅಭಿಯಾನಕ್ಕೆ ರಾಷ್ಟ್ರಭಕ್ತರ ಬಳಗ ಕೈಜೋಡಿಸಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಬಳಗದ ಕಾರ್ಯಕರ್ತರು ಸಾರ್ವಜನಿಕರನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವುದರೊಂದಿಗೆ ಉಚಿತ ತಪಾಸಣಾ ಶಿಬಿರದ ಪ್ರಯೋಜನ ಪಡೆಯಲು ನೆರವಾಗಲಿದ್ದಾರೆ.

– ಕೆ. ಈ. ಕಾಂತೇಶ್, ಆಸ್ಪತ್ರೆಯ ನಿರ್ದೇಶಕ

ಶಿಬಿರದ ಮಾಹಿತಿ ಹಾಗೂ ನೋಂದಣಿಗಾಗಿ 08182-270001, 7829290303, 7829290505 ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಾ. ಶಂಕರ್, ಬಾಲು, ಮೋಹನ್ ಜಾದವ್, ವಿಶ್ವೇಶ್ವರಯ್ಯ, ಕುಬೇರಪ್ಪ, ಮೋಹನ್ ಸೇರಿದಂತೆ ಹಲವರು ಇದ್ದರು.