ಶಿವಮೊಗ್ಗ ಜಿಲ್ಲೆ ಬಂದ್‌ ಅನಿವಾರ್ಯ, ಶೀಘ್ರ ದಿನಾಂಕ ಪ್ರಕಟ      

ಶಿವಮೊಗ್ಗ: ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯಾದ್ಯಂತ ಬಂದ್ ಆಚರಿಸಿ ಹೋರಾಟ ಮಾಡುವುದು ಅನಿವಾರ್ಯ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. ಜಿಲ್ಲೆಯಾದ್ಯಂತ ಬಂದ್ ಆಚರಿಸುವ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

Kalluru-Megharaj-Press-Meet-about-High-Court-Peeta-in-Shivamogga

ಹೈಕೋರ್ಟ್‌ ಪೀಠವಿಲ್ಲದ ಕಾರಣ ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರು ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇದೆ. ಈ 7 ಜಿಲ್ಲೆಗಳಲ್ಲಿ ಒಟ್ಟು 3.34 ಲಕ್ಷಕ್ಕೂ ಹೆಚ್ಚು ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ ಎಂದರು.

ಸುದ್ದಿಗೋ‍ಷ್ಠಿಯಲ್ಲಿ ಹೆಚ್.ಎಂ. ಸಂಗಯ್ಯ, ನಂಜುಂಡಪ್ಪ, ಚಾಬೂ ಸಾಬ್, ಗೀತಾ, ಶಿವಣ್ಣ, ಆಶೋಕ್, ಆಲೀಂಖಾನ್, ಶಂಕ್ರಾನಾಯ್ಕ, ಚಂದ್ರಪ್ಪ ಇದ್ದರು.