ಬರ, ಕುಡಿಯುವ ನೀರು, ಶಿವಮೊಗ್ಗ ಡಿಸಿ ಮಹತ್ವದ ಮೀಟಿಂಗ್‌, ಇಲ್ಲಿದೆ ಸಭೆಯಲ್ಲಿ ಚರ್ಚೆಯಾದ 5 ಪಾಯಿಂಟ್‌

ಶಿವಮೊಗ್ಗ: ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, 55,208 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇನ್ನು, ಯಾವುದೇ ಗ್ರಾಮ ಅಥವಾ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ತಕ್ಷಣ ಕ್ರಿಯಾ ಯೋಜನೆ ರೂಪಿಸಲು ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. (ಈ ಸುದ್ದಿಯನ್ನು ಇನ್ನು 105 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಏನೆಲ್ಲ ಸೂಚನೆ ನೀಡಿದರು. ಇಲ್ಲಿದೆ ಪಾಯಿಂಟ್ಸ್‌.

Shivamogga-DC-Prakash-G.T.-Nittali

POINT-1

ಮಳೆ ಅಭಾವ, ಜಲಾಶಯಗಳ ಸ್ಥಿತಿ: ಮಾರ್ಚ್‌ನಿಂದ ಮೇ ವರೆಗೆ ಶೇ.39 ಹಾಗೂ ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಶೇ.52 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ.37 ರಷ್ಟು ಮಳೆ ಅಭಾವ ಉಂಟಾಗಿದೆ. ಭದ್ರಾ ಜಲಾಶಯದಲ್ಲಿ ಪ್ರಸ್ತುತ 54 ಟಿಎಂಸಿ ನೀರಿದೆ. ಇದರಲ್ಲಿ 13 ಟಿಎಂಸಿ ಡೆಡ್ ಸ್ಟೋರೇಜ್‌ ಆಗಿದೆ. ತುಂಗಾ ಜಲಾಶಯದಲ್ಲಿ 2.411 ಟಿಎಂಸಿ ನೀರಿದೆ. ಮೇ ತಿಂಗಳವರೆಗೆ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ. ಲಿಂಗನಮಕ್ಕಿ ಜಲಾಶಯದಲ್ಲಿ 73.70 ಟಿಎಂಸಿ ನೀರಿದ್ದು, ಮೇ ವರೆಗೆ ಬಳಸಬಹುದು.

POINT-2

ಅಂತರ್ಜಲ ಸ್ಥಿತಿ: ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಿದೆ. ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ 5–6 ಗ್ರಾ.ಪಂ.ಗಳಲ್ಲಿ ಸಮಸ್ಯೆ ಕಂಡುಬಂದಿದೆ. ಇನ್ನು, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯುವಾಗ ಎಚ್ಚರಿಕೆ ವಹಿಸಬೇಕು. ಅಕ್ಟೋಬರ್ ಅಂತ್ಯಕ್ಕೆ ಸರಾಸರಿ ಅಂತರ್ಜಲ ಮಟ್ಟ 10.33 ಮೀಟರ್ ದಾಖಲಾಗಿದೆ. ಪ್ರಸ್ತುತ 200 ಅಡಿಯಲ್ಲಿರುವ ಅಂತರ್ಜಲ ಮೇ ವೇಳೆಗೆ 400 ರಿಂದ 500 ಅಡಿಗೆ ಕುಸಿಯುವ ಸಾಧ್ಯತೆ ಇದೆ. ಕೃತಕ ಅಂತರ್ಜಲ ರೀಚಾರ್ಜ್ ಪಿಟ್‌ಗಳನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

POINT-3

55,208 ಹೆಕ್ಟೇರ್ ಬೆಳೆ ಹಾನಿ: ಜಿಲ್ಲೆಯಲ್ಲಿ 51,690 ಹೆಕ್ಟೇರ್ ಕೃಷಿ ಬೆಳೆ ಹಾಗೂ 3,518 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 55,208 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

POINT-4

ಬಿತ್ತನೆ ಬೀಜ, ರಸಗೊಬ್ಬರ, ಮೇವು ದಾಸ್ತಾನು: ಜಿಲ್ಲೆಯಲ್ಲಿ 7,905.54 ಕ್ವಿಂಟಾಲ್ ಬಿತ್ತನೆ ಬೀಜದ ಗುರಿ ಪೈಕಿ 3,331.42 ಕ್ವಿಂಟಾಲ್ ವಿತರಿಸಲಾಗಿದೆ. 39,704 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಜಿಲ್ಲೆಯಲ್ಲಿ 4,84,298 ದೊಡ್ಡ ಹಾಗೂ 86,130 ಸಣ್ಣ ಜಾನುವಾರುಗಳಿದ್ದು, 11,35,970 ಟನ್ ಮೇವು ಲಭ್ಯವಿದೆ. ಇದು ಮುಂದಿನ 55 ವಾರಗಳಿಗೆ ಸಾಕಾಗಲಿದೆ.

POINT-5

ಮಳೆ ಮಾಪನ, ಭೂ ಕುಸಿತ ತಡೆ: ಬೋರ್‌ವೆಲ್ ಪುನಶ್ಚೇತನ ಹಾಗೂ ರೀಚಾರ್ಜ್ ಪಿಟ್ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕು. ಗ್ರಾಮ ಪಂಚಾಯಿತಿಗಳ ಟೆಲಿಮೆಟ್ರಿಕ್ ಮಳೆ ಮಾಪಕಗಳ (ಟಿಆರ್‌ಜಿ) ಕಾರ್ಯನಿರ್ವಹಣೆಯನ್ನು ವಿಎಒ ನೋಡಲ್ ಆಫೀಸರ್‌ಗಳ ಮೂಲಕ ಪರಿಶೀಲಿಸಿ 1 ತಿಂಗಳೊಳಗೆ ವರದಿ ಸಲ್ಲಿಸಬೇಕು. ಮಂಜೂರಾಗಿರುವ 84 ಭೂಕುಸಿತ ತಡೆ ಕಾಮಗಾರಿಗಳನ್ನು ನಿಗದಿತ ವೇಳೆಯೊಳಗೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: