ದುರ್ಗಿಗುಡಿಯ ಚಿಪ್ಸ್‌ ಅಂಗಡಿ ಮಾಲೀಕರಿಗೆ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

ಶಿವಮೊಗ್ಗ: ದುರ್ಗಿಗುಡಿ ಜೈಲ್ ರಸ್ತೆಯ ಚಿಪ್ಸ್ ಅಂಗಡಿಯ ಸಿಬ್ಬಂದಿ ಮಾಲೀಕರಿಗೆ ₹7 ಲಕ್ಷ ವಂಚಿಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ತಮಿಳುನಾಡು ಮೂಲದ ಸರಸ್ವತಿ ಎಂಬುವರಿಗೆ ಸೇರಿದ ರಾಘವೇಂದ್ರ ಹಾಟ್ ಚಿಪ್ಸ್ ಅಂಗಡಿಯಲ್ಲಿ ಘಟನೆ ನಡೆದಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ರಾಮಮೂರ್ತಿ ಮತ್ತು ಕಲ್ಯಾಣಿ ಎಂಬುವರು ₹7 ಲಕ್ಷ ವಂಚಿಸಿದಾರೆ ಎಂದು ಆರೋಪಿಸಲಾಗಿದೆ.

140823-Jayanagara-Police-Station

ಚಿಪ್ಸ್‌ ಅಂಗಡಿಯಲ್ಲಿ ಆಗಿದ್ದೇನು?

ಸರಸ್ವತಿ ಅವರು ಶಿವಮೊಗ್ಗದಲ್ಲಿ ಚಿಪ್ಸ್‌ ಅಂಗಡಿ ತೆರೆದಿದ್ದರು. ತಮಿಳುನಾಡು ರಾಜ್ಯದ ಧರ್ಮಪುರಿಯಲ್ಲಿ ಅವರ ಸಹೋದರರು ಮೃತಪಟ್ಟ ಹಿನ್ನಲೆ ಸರಸ್ವತಿ ಅವರ ಪತಿ ಅಲ್ಲಿಗೆ ತೆರಳಿ ಬೇಕರಿ ನಡೆಸುತ್ತಿದ್ದರು. ಹಾಗಾಗಿ ಸರಸ್ವತಿ ಅವರು ಧರ್ಮಪುರಿಗೆ ತೆರಳಿದ್ದರು. ಶಿವಮೊಗ್ಗದ ಚಿಪ್ಸ್‌ ಅಂಗಡಿಯನ್ನು ರಾಮಮೂರ್ತಿ ಮತ್ತು ಕಲ್ಯಾಣಿ ಎಂಬುವವರು ನಡೆಸುತ್ತಿದ್ದರು.

ಆರಂಭದಲ್ಲಿ ಅಂಗಡಿಯ ಲಾಭದ ಹಣವನ್ನು ಸರಸ್ವತಿ ಅವರ ಬ್ಯಾಂಕ್‌ ಖಾತೆಗೆ ಕಳುಹಿಸುತ್ತಿದ್ದರು. ನಂತರ ಸರಿಯಾಗಿ ಲಾಭದ ಹಣ ನೀಡದೆ, ಆಲುಗಡ್ಡೆ ಖರೀದಿಸಿದರಿಗು ಹಣ ನೀಡಿರಲಿಲ್ಲ. ಸರಸ್ವತಿ ಅವರು ಶಿವಮೊಗ್ಗಕ್ಕೆ ಬಂದು ವಿಚಾರಿಸಿದಾಗ ಅಂಗಡಿಯನ್ನು ರಿಪೇರಿ ಮಾಡಿಸಿಕೊಟ್ಟರೆ ಲಾಭವನ್ನು ಸರಿಯಾಗಿ ನೀಡುವುದಾಗಿ ನಂಬಿಸಿದ್ದರು. ಕೊನೆಗೆ ಅಂಗಡಿಯ ಹಣವನ್ನು ತೆಗೆದುಕೊಂಡು ರಾಮಮೂರ್ತಿ ಮತ್ತು ಕಲ್ಯಾಣಿ ಶಿವಮೊಗ್ಗ ತೊರೆದಿದ್ದಾರೆ ಎಂದು ಆರೋಪಿಸಲಾಗಿದೆ.

ತಮಗೆ 7 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ಸರಸ್ವತಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.