ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಲಾಯಿತು. ಈ ವೇಳೆ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಕ್ವಿಟ್ ಇಂಡಿಯಾ ಚಳವಳಿ ನೆನಪು ಮತ್ತು ಸ್ಫೂರ್ತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಪೊರೇಟ್‌ಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆ ಮೊಳಗಿದವು. ರೈತರ ಬೆಳೆಗಳಿಗೆ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ (MSP) ಜಾರಿಗೊಳಿಸಬೇಕು. ರೈತರು ಮತ್ತು ಕೃಷಿ ಕೂಲಿಕಾರರ ಸಾಲ ಮನ್ನಾ ಮಾಡಬೇಕು. ಬಾಕಿ ಇರುವ ಬೆಳೆ ವಿಮೆ ಪರಿಹಾರ ಬಿಡುಗಡೆಗೊಳಿಸಬೇಕು. ಅನಾವೃಷ್ಟಿ, ಅತಿವೃಷ್ಟಿ ಪರಿಹಾರ ಹೆಚ್ಚಿಸಬೇಕು. ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಕನಿಷ್ಠ ಕೂಲಿಯನ್ನು ಶಾಸನಬದ್ಧಗೊಳಿಸಬೇಕು. ಬ್ಯಾಂಕ್, ವಿಮೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಖಾಸಗೀಕರಣ ನಿಲ್ಲಿಸಬೇಕು. ರಸಗೊಬ್ಬರದ ಬೆಲೆ ಇಳಿಸಿ ಸಮರ್ಪಕವಾಗಿ ವಿತರಿಸಬೇಕು ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ರಸ್ತೆ ತಡೆ, ರೈತರು ವಶಕ್ಕೆ
ಇನ್ನು, ಶಿವಪ್ಪನಾಯಕ ಪ್ರತಿಮೆ ಬಳಿ ಬಿ.ಹೆಚ್.ರಸ್ತೆಯಲ್ಲಿ ವಾಹನ ಸಂಚಾರ ತಡೆದ ರೈತರು ಪ್ರತಿಭಟನೆ ನಡೆಸಿದರು. ರೈತ ವಿರೋಧಿ ನೀತಿ ಖಂಡಿಸಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ರೈತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಪ್ರಮುಖರಾದ ಕೆ.ಎಲ್.ಅಶೋಕ್, ಟಿ.ಹೆಚ್.ಹಾಲೇಶಪ್ಪ, ಹನುಮಮ್ಮ, ನಾರಾಯಣ, ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಭಾಗ್ಯಾ ರಾಘವೇಂದ್ರ, ಕೆ.ರಾಘವೇಂದ್ರ, ಇ.ಬಿ.ಜಗದೀಶ್, ಎಂ.ಮಂಜಪ್ಪ, ಎಂ.ಮಹಾದೇವಪ್ಪ, ಪಿ.ಶೇಖರಪ್ಪ, ಎಂ.ಎಸ್.ತಿಮ್ಮಪ್ಪ, ಗುರುಶಾಂತ, ಎಂ.ಡಿ.ನಾಗರಾಜ್, ಸಿ.ಚಂದ್ರಪ್ಪ, ಜ್ಞಾನೇಶ್, ಜಿ.ಎನ್.ಪಂಚಾಕ್ಷರಿ, ಸಿ.ಬಿ.ಹನುಮಂತಪ್ಪ ಮತ್ತಿತರರು ಪ್ರತಿಭಟನೆಯಲ್ಲಿದ್ದರು.