ಭದ್ರಾ ಜಲಾಶಯದವರೆಗೆ ಪಾದಯಾತ್ರೆಯ ಎಚ್ಚರಿಕೆ ನೀಡಿದ ರೈತರು, ಕಾರಣವೇನು?

ಶಿವಮೊಗ್ಗ: ಭದ್ರಾ ಜಲಾಶಯದ ಅಚ್ಚು ಕಟ್ಟು ಪ್ರದೇಶ ವ್ಯಾಪ್ತಿಯ ಅಡಿಕೆ ಸೇರಿದಂತೆ ಬಹುವಾರ್ಷಿಕ ಬೆಳೆಗಳನ್ನು ರಕ್ಷಿಸಲು ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಕನಿಷ್ಠ 10 ರಿಂದ 15 ದಿನ ನೀರು ಹರಿಸಬೇಕು. ಈ ಕುರಿತ ರಾಜ್ಯ ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಕೆ.ಟಿ. ಗಂಗಾಧರ್ ಒತ್ತಾಯಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಲಾಗುವುದು. ಈ ಅವಧಿಯಲ್ಲಿ ಅಡಿಕೆ ತೋಟಗಳ ರಕ್ಷಣೆಗೆ ಕೈಗೊಳ್ಳುವ ಕ್ರಮದ ಬಗ್ಗೆ ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ಸೆ.17 ರಂದು ಬೆಳಿಗ್ಗೆ 11 ಗಂಟೆಗೆ ಮಲವಗೊಪ್ಪ ಬಳಿಯ ಕಾಡಾ ಕಚೇರಿಯಿಂದ ಭದ್ರಾವತಿ ಮಾರ್ಗವಾಗಿ ಭದ್ರಾ ಜಲಾಶಯದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Farmer-Leader-KT-Gangadhar-press-meet-about-Bhadra-dam-water

ಬೆಳೆ ಉಳಿಸಿಕೊಳ್ಳುವುದು ಅನಿವಾರ್ಯ

ಭದ್ರಾ ಜಲಾಶಯದ ಪೂರ್ಣ ಸಾಮರ್ಥ್ಯ 71.5 ಟಿಎಂಸಿ ಇದ್ದರೂ, ಈ ಬಾರಿ ಮಳೆ ಕೊರತೆಯಿಂದ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಪ್ರಸ್ತುತ 178 ಅಡಿ ನೀರು ಸಂಗ್ರಹವಿದ್ದು, ಈ ಹಿನ್ನೆಲೆಯಲ್ಲಿ ಭತ್ತದಂತಹ ಮಳೆಗಾಲದ ಬೆಳೆಗಳಿಗೆ ನೀರು ಹರಿಸುವ ಬೇಡಿಕೆಯನ್ನು ರೈತರು ಸರ್ಕಾರ ಹಾಗೂ ಅಧಿಕಾರಿಗಳು ಮುಂದೆ ಇಟ್ಟಿರಲಿಲ್ಲ. ಆದರೆ, ಈಗ  ಅಡಿಕೆ, ತೆಂಗು, ಬಾಳೆ ಸೇರಿದಂತೆ ಬಹುವಾರ್ಷಿಕ ಬೆಳೆಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಮಳೆಯ ನಿರೀಕ್ಷೆಯಲ್ಲಿ ರೈತರು ಇದುವರೆಗೆ ಕಾದಿದ್ದಾರೆ. ಇದೀಗ ಮಳೆಯ ಸೂಚನೆಯೂ ಇಲ್ಲ. ಜಲಾಶಯದಲ್ಲಿರುವ ನೀರಿನಿಂದ ಕನಿಷ್ಠ ಒಂದು ಬಾರಿ 15 ದಿನ ನೀರು ಹರಿಸಿದರೆ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಬಹುದು. ಬೇರೆ ಬೆಳೆಗಳಿಗೆ ನೀರು ಕೇಳುತ್ತಿಲ್ಲ. ಈಗಾಗಲೇ ನಿಂತಿರುವ ಬಹುವಾರ್ಷಿಕ ಬೆಳೆಗಳ ರಕ್ಷಣೆಗೆ ಮಾತ್ರ ನೀರು ಕೇಳುತ್ತಿದ್ದೇವೆ ಎಂದರು.

ಮೇಲ್ದಂಡೆ ಯೋಜನೆಗೆ ವೇಗ ನೀಡಿ

ಭದ್ರಾ ಮೇಲ್ದಂಡೆ ಯೋಜನೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೇಗ ನೀಡಬೇಕು. ಕೇಂದ್ರ ಸರ್ಕಾರ ₹5,300 ಕೋಟಿ ನೆರವು ಘೋಷಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ವಿಳಂಬವಾಗುತ್ತಿದೆ ಎಂದು ಟೀಕಿಸಿದರು.

ಪಾದಯಾತ್ರೆಗೂ ಮುನ್ನ ಕಾಡಾ ಕಚೇರಿಯಲ್ಲಿ ಅಧ್ಯಕ್ಷರು ಹಾಗೂ ಆಡಳಿತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಸರ್ಕಾರ ಸ್ಪಷ್ಟ ಕ್ರಮದ ಭರವಸೆ ನೀಡಿದರೆ ಹೋರಾಟ ಮುಂದುವರಿಸುವ ಅಗತ್ಯವಿಲ್ಲ. ಇಲ್ಲವಾದರೆ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು. ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜಗದೀಶ್ ನಾಯಕ್, ಪ್ರಮುಖರಾದ ಸಿ.ಎನ್. ರಂಗಪ್ಪ, ರಘುಪತಿ, ಕೆ. ಜಗದೀಶ್, ಪ್ರಕಾಶ್ ತಲ್ಲಿ ಕಟ್ಟೆ, ಫರೀದ್, ಶಶಿ ನಲ್ಲಿಸರ, ಸಣ್ಣರಂಗಪ್ಪ, ಮಂಜುನಾಥ್ ಇದ್ದರು.