ಶಿವಮೊಗ್ಗ: ಬೂಸಾ ಚಳವಳಿಯ ಸಂದರ್ಭ ಕ್ರಾಂತಿಕಾರಕ ನಿಲುವುಗಳನ್ನು ಬೆಂಬಲಿಸಿ ಹೋರಾಟ ನಡೆಸಿದ್ದ ಶಿವಮೊಗ್ಗದ ಸಾಮಾಜಿಕ ಹೋರಾಟಗಾರ ಕಲ್ಲೂರು ಮೇಘರಾಜ ಅವರನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಏಪ್ರಿಲ್ 21 ರಂದು ಸನ್ಮಾನಿಸಲಾಗುತ್ತಿದೆ (felicitation).
ಬಿ.ಬಸವಲಿಂಗಪ್ಪ ಅವರ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ಬಿ.ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮೇಘರಾಜ ಅವರಿಗೆ ಈ ಗೌರವ ಸಮರ್ಪಿಸಲಾಗುವುದು.
ಇದನ್ನೂ ಓದಿ : ಲೋಕಸಭೆಯಲ್ಲಿ ಪ್ರಸ್ತಾಪವಾಯ್ತು ಹೊಸನಗರ ವಿಧಾನಸಭೆ ಕ್ಷೇತ್ರದ ಹೊಕ್ಕೊತ್ತಾಯದ ವಿಚಾರ
1973ರ ನವೆಂಬರ್ನಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅಂದಿನ ಸಚಿವ ಬಿ. ಬಸವಲಿಂಗಪ್ಪ ಅವರು ದಲಿತರು ಇಂಗ್ಲಿಷ್ ಕಲಿಯಬೇಕು ಮತ್ತು ಕನ್ನಡದ ಕೆಲವು ಹಳೆಯ ಸಾಹಿತ್ಯಗಳು ಕೇವಲ ಬೂಸಾ ಇದ್ದಂತೆ ಎಂದು ಹೇಳಿದ್ದರು. ಈ ಹೇಳಿಕೆಯು ದೊಡ್ಡ ವಿವಾದ ಸೃಷ್ಟಿಸಿ, ರಾಜ್ಯಾದ್ಯಂತ ಬಸವಲಿಂಗಪ್ಪ ಅವರ ವಿರುದ್ಧ ಬೂಸಾ ಚಳುವಳಿಗೆ ಕಾರಣವಾಯಿತು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ದಲಿತ ಕವಿ ಡಾ. ಸಿದ್ದಲಿಂಗಯ್ಯ, ಕಲ್ಲೂರು ಮೇಘರಾಜ, ಡಾ. ಅಗ್ರಹಾರ ಕೃಷ್ಣಮೂರ್ತಿ, ಪ್ರೊ. ಬೀಚನಹಳ್ಳಿ ಕರೀಗೌಡ ಹಾಗೂ ಗಂಗಣ್ಣ ಕೆಂಚೇನಹಳ್ಳಿ ಅವರು ನೂರಾರು ವಿದ್ಯಾರ್ಥಿಗಳೊಂದಿಗೆ ಬಸವಲಿಂಗಪ್ಪ ಅವರ ನಿಲುವನ್ನು ಬೆಂಬಲಿಸಿ ಹೋರಾಟ ನಡೆಸಿದ್ದರು. ಬೂಸಾ ಚಳವಳಿಯ 50 ವರ್ಷಗಳ ನೆನಪಿನಲ್ಲಿ ಈ ಹೋರಾಟಗಾರರನ್ನು ಸ್ಮರಿಸಲಾಗುತ್ತಿದೆ. ಕಲ್ಲೂರು ಮೇಘರಾಜ ಅವರಿಗೆ ಈ ಹಿಂದೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಲಭಿಸಿತ್ತು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ಮುಖಂಡರಾದ ಹೆಚ್.ಎಂ. ಸಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Editor
ನಿತಿನ್ ಆರ್.ಕೈದೊಟ್ಲು






