ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ದುರ್ಬಳಕೆ ತಡೆಗಾಗಿ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ಹಾಗೂ ಗುರುತಿನ ಚೀಟಿ ನೀಡಲು ಉದ್ದೇಶಿಸಿರುವ ಸರ್ಕಾರದ ನಿರ್ಧಾರವನ್ನು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ಸ್ವಾಗತಿಸಿದೆ.
ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಗೃಹಲಕ್ಷ್ಮಿ, ಗೃಹಜ್ಯೋತಿ ದುರ್ಬಳಕೆಗೆ ಬ್ರೇಕ್
ಶಿವಮೊಗ್ಗ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 9,247 ಫಲಾನುಭವಿಗಳು ನಿಧನರಾಗಿದ್ದರೂ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದೆ. ಅದನ್ನು ಬೇರೆಯವರು ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಒಂದೇ ಮನೆಯಲ್ಲಿ ಇಬ್ಬರು-ಮೂವರು ಮಹಿಳೆಯರು ಸೌಲಭ್ಯ ಪಡೆಯುತ್ತಿದ್ದಾರೆ. 5,618 ಆದಾಯ ತೆರಿಗೆ ಪಾವತಿದಾರರು ಅನರ್ಹವಾಗಿ ಯೋಜನೆಯ ಲಾಭ ಪಡೆಯುತ್ತಿರುವುದು ಪತ್ತೆಯಾಗಿದೆ. ಇಂತಹವರನ್ನು ತಕ್ಷಣ ಪಟ್ಟಿಯಿಂದ ಕೈಬಿಡಲು ಸೂಚಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ ಗೃಹಬಳಕೆಯ ಉಚಿತ ವಿದ್ಯುತ್ ಅನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಹಾಗೂ ಒಬ್ಬರ ಹೆಸರಲ್ಲೇ ಒಂದಕ್ಕಿಂತ ಹೆಚ್ಚು ಮೀಟರ್‌ಗಳಿರುವುದು ಪತ್ತೆಯಾಗಿದೆ. ಬಾಡಿಗೆ ಮನೆಗಳ ನೈಜ ಫಲಾನುಭವಿಗಳ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ.
ಸ್ಮಾರ್ಟ್ ಕಾರ್ಡ್, ಮತದಾನದ ಹಕ್ಕು ಕಡ್ಡಾಯ
ಶಕ್ತಿ ಯೋಜನೆಯಡಿ ಅರ್ಹ ಮಹಿಳೆಯರಿಗೆ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ನೀಡಲು ಉದ್ದೇಶಿಸಲಾಗಿದೆ. ಇದರೊಂದಿಗೆ, ಮತದಾನದ ಹಕ್ಕು ಇಲ್ಲದಿದ್ದಲ್ಲಿ ಗ್ಯಾರಂಟಿ ಸೌಲಭ್ಯ ಸಿಗುವುದಿಲ್ಲ ಎಂಬ ನಿಯಮ ಇರುವುದರಿಂದ, ಬಿಎಲ್‌ಒಗಳ ಮೂಲಕ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಜಾಗೃತಿ ಮೂಡಿಸಲು ತಾಲೂಕು ಸಮಿತಿಗಳಿಗೆ ಸೂಚಿಸಲಾಯಿತು. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 3,88,559 ಮಹಿಳೆಯರಿಗೆ ಒಟ್ಟು ₹3,110.48 ಕೋಟಿ ಹಾಗೂ ಯುವನಿಧಿ ಯೋಜನೆಯಡಿ 1,03,610 ನಿರುದ್ಯೋಗಿಗಳಿಗೆ ಒಟ್ಟು ₹30.82 ಕೋಟಿ ಪಾವತಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಗ್ರಾಮೀಣ ಭಾಗದ ಶಕ್ತಿ ಯೋಜನೆ ಸಮಸ್ಯೆಗಳು
ಸಭೆಯಲ್ಲಿ ಶಿಕಾರಿಪುರ, ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಬಸ್ಸುಗಳ ಕೊರತೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸದಸ್ಯರು ಆಕ್ಷೇಪವೆತ್ತಿದರು. ಹೊಸನಗರ ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಇಲ್ಲದೆ ಮಹಿಳೆಯರಿಗೆ ಶಕ್ತಿ ಯೋಜನೆಯ ಸೌಲಭ್ಯ ಸಿಗುತ್ತಿಲ್ಲ ಹಾಗೂ ತೀರ್ಥಹಳ್ಳಿ-ಬಸವಾನಿ ಮಾರ್ಗದಲ್ಲಿ ಬಸ್ ಬಿಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ ಶೇ.65 ರಷ್ಟು ಮಹಿಳೆಯರು ಪ್ರಯಾಣಿಸಿದ್ದು, ಸರ್ಕಾರ ₹5,527.41 ಕೋಟಿ ವೆಚ್ಚ ಮಾಡಿದೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ನವೀನ್ ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಲ್ಲಿ ನಿಯಮಬಾಹಿರವಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೇಳಬಾರದು ಹಾಗೂ ಸರ್ವರ್ ಸಮಸ್ಯೆ ನಿವಾರಿಸಬೇಕು ಎಂದು ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಶಿವಣ್ಣ, ಎಂ.ಎಸ್.ಬಸವರಾಜಪ್ಪ, ಅಫ್ತಾಬ್ ಪರ್ವೇಜ್, ರಮೇಶ್, ಸದಸ್ಯರಾದ ಅಮೀರ್ ಅಮ್ಜಾ, ಪ್ರಭಾಕರ್, ಭವ್ಯ ಕೃಷ್ಣಮೂರ್ತಿ, ರಾಹುಲ್, ಅರ್ಚನಾ, ನವುಲೇಶ್, ಶಿವಾನಂದ, ಉದಯಕುಮಾರ್, ಹೆಚ್ ಎಂ ಮಧು, ಚಿದಂಬರ, ಜಯಶೀಲಪ್ಪಗೌಡ, ಜಯಂತ್, ನಾಗನಗೌಡ ಇತರೆ ಸದಸ್ಯರು ಹಾಗೂ ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಆಹಾರ ಇಲಾಖೆ ಉಪ ನಿರ್ದೇಶಕ ಸತೀಶ್ ಇತರೆ ಅಧಿಕಾರಿಗಳು ಹಾಜರಿದ್ದರು.

