SHIVAMOGGA LIVE | 16 JULY 2023
SHIMOGA : ಸೋಗಾನೆ ವಿಮಾನ ನಿಲ್ದಾಣದಲ್ಲಿ (Airport) ಆ.11ರಿಂದ ವಿಮಾನಯಾನ ಸೇವೆ ಆರಂಭವಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಅಗತ್ಯ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕ ಕ್ಯಾಪ್ಟನ್ ಶಮಂತ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯಿತು?
78 ಆಸನವುಳ್ಳ ಎಟಿಆರ್ 72 ಮಾದರಿಯ ಇಂಡಿಗೋ ವಿಮಾನ ಕಾರ್ಯಾಚರಣೆ ಆರಂಭಿಸಲಿದೆ. ವಿಮಾನಯಾನಕ್ಕೆ ಅಗತ್ಯ ಸಿದ್ಧತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು. ಇಂಡಿಗೋ ಸಂಸ್ಥೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ವೀಕ್ಷಣೆ ವೇಳೆ ನೀಡಿರುವ ಅಂಶಗಳು ಮತ್ತು ಹೆಚ್ಚುವರಿ ಸೌಕರ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು.
ಪ್ರಯಾಣಿಕರಿಗೆ ಮೂಲ ಸೌಲಭ್ಯ ದೊರೆಯಬೇಕು. ಕಾಫಿ, ಟೀ, ಉಪಹಾರ, ತಿನಿಸು ಮತ್ತು ಇತರೆ ಮಳಿಗೆಗಳನ್ನು ಸ್ಥಾಪಿಸಬೇಕು. ತುರ್ತು ಸಂದರ್ಭ ನೆರವು ನೀಡಲು ಆಂಬುಲೆನ್ಸ್ ಸಹ ಇರಬೇಕು. ಜಿಲ್ಲೆಯ ಪ್ರವಾಸೋದ್ಯಮವನ್ನು ಪರಿಚಯಿಸಲು ಪ್ರವಾಸೋದ್ಯಮ ಇಲಾಖೆಗೆ ಒಂದು ಮಳಿಗೆ ಸ್ಥಾಪಿಸಲು ಜಾಗ ನೀಡಬೇಕು.
ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ ಸಿದ್ಧಪಡಿಸಿಬೇಕು. ಕಾರ್ಯಾಚರಣೆ ಆರಂಭದ ದಿನ ವೆಬ್‌ಸೈಟ್‌ನ್ನು ಗಣ್ಯರಿಂದ ಉದ್ಘಾಟಿಸಬೇಕು. ಉದ್ಘಾಟನೆ ದಿನ ಗಣ್ಯರ ಸ್ವಾಗತ ಮತ್ತು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಕಾನೂನು – ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ವಿಮಾನ ನಿಲ್ದಾಣದ ಸುತ್ತಲು ಅಗತ್ಯ ಬಫರ್ ಜೋನ್ ಅಧಿಸೂಚನೆಗೆ ಕ್ರಮ ಕೈಗೊಳ್ಳಬೇಕು.
ವಿಮಾನದಲ್ಲಿ ಬರ್ತಾರೆ ಮಿನಿಸ್ಟರ್
ಶಿವಮೊಗ್ಗ ವಿಮಾನ ನಿಲ್ದಾಣದ (Airport) ನಿರ್ದೇಶಕ ಕ್ಯಾಪ್ಟನ್ ಶಮಂತ್ ಮಾತನಾಡಿ, ಬೃಹತ್ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ಆಗಸ್ಟ್ 11ರಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ಹೊರಟು 11 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣದ ತಲುಪಲಿದ್ದಾರೆ. ಬಳಿಕ 11.20ಕ್ಕೆ ವಿಮಾನ ಪ್ರಯಾಣಿಕರೊಂದಿಗೆ ವಿಮಾನದಲ್ಲಿಯೇ ಬೆಂಗಳೂರಿಗೆ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್ ಬುಕ್ಕಿಂಗ್‌ಗೆ ದಿನಾಂಕ ಫಿಕ್ಸ್, ಯಾವ ಮಾದರಿ ವಿಮಾನ? ಎಷ್ಟು ಸೀಟ್ ಇರುತ್ತೆ?
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಮೇಘನಾ, ಉಪ ವಿಭಾಗಾಧಿಕಾರಿ ರವಿಚಂದ್ರನ್ ನಾಯಕ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸಂಪತ್ ಕುಮಾರ್ ಪಿಂಗಳೆ, ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಹಾಯಕ ಕಮಾಂಡೆಂಟ್ ಚಂದ್ರಶೇಖರ್ ಮತ್ತಿತರರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200